ಕೂಡಿಗೆ, ಏ. ೪: ರಾತ್ರಿ ವೇಳೆಯಲ್ಲಿ ಲಗ್ಗೆ ಇಟ್ಟು ಬೆಳೆ ನಾಶ ಮಾಡುತ್ತಿದ್ದ ಕಾಡಾನೆಗಳು ಇದೀಗ ಹಾಡಹಗಲೇ ಗ್ರಾಮದೊಳಗೆ ನುಸುಳಿ ಆತಂಕ ಸೃಷ್ಟಿಸುತ್ತಿದೆ. ಯಡವನಾಡು-ಹುದುಗೂರು ಮೀಸಲು ಅರಣ್ಯ ಪ್ರದೇಶದಲ್ಲಿನ ಕಾಡಾನೆಗಳು ರಾತ್ರಿ ಸಮಯದಲ್ಲಿ ಸಮೀಪದ ಹಾರಂಗಿಯ ನಾಲೆಗೆ ಬಂದು ನೀರು ಕುಡಿದು ನಾಲೆಯ ಮೂಲಕ ದಾಟಿ ಸಮೀಪದ ರೈತರ ಜಮೀನಿಗೆ ದಾಳಿ ಮಾಡಿ ಬೆಳೆಗಳನ್ನು ಹಾಳುಮಾಡುತ್ತಿರುವುದು ಸಹಜವಾಗಿದೆ. ಆದರೆ ಹುದುಗೂರು ಸಮೀಪ ಸೀತಾ ಕಾಲೋನಿಯ ಹಾಡಿ ಒಳಗೆ ಬೆಳಿಗ್ಗೆ ೧೦ ಗಂಟೆಗೆ ಹಾರಂಗಿ ನಾಲೆಯನ್ನು ದಾಟಿ ಗ್ರಾಮದ ಒಳಗೆ ಬರಲು ಪ್ರಯತ್ನಿಸುವ ಸಂದರ್ಭದಲ್ಲಿ ಗ್ರಾಮಸ್ಥರು ಪಟಾಕಿ ಸಿಡಿಸಿ ಕಾಡಿಗೆ ಓಡಿಸಿದ್ದಾರೆ.

ಆನೆಕಾಡಿನಿಂದ ಬೆಂಡೆಬೆಟ್ಟದ ಮೀಸಲು ಅರಣ್ಯ ಪ್ರದೇಶದಲ್ಲಿನ ಕಾಡಾನೆಗಳ ಹಿಂಡು ಹಾರಂಗಿ ನದಿಯನ್ನು ದಾಟಿ ಹುದುಗೂರು, ಮಾದಲಾಪುರ ವ್ಯಾಪ್ತಿಯಲ್ಲಿ ರೈತರ ಜಮೀನಿಗೆ ದಾಳಿ ಮಾಡಿ ಬೇಸಿಗೆ ಸಮಯದ ಸಂದರ್ಭದಲ್ಲಿ ಬೆಳೆಸಲಾದ ಸಹಿ ಗೆಣಸು ಮತ್ತು ಬಾಳೆಯನ್ನು ಸಂಪೂರ್ಣವಾಗಿ ತಿಂದು, ತುಳಿದು ಭಾರೀ ನಷ್ಟಪಡಿಸಿವೆ

ಹುದುಗೂರು ಮತ್ತು ಕಾಳಿದೇವನ ಹೊಸೂರು ಗ್ರಾಮದ ಬಸವ, ನಾಗರಾಜ್, ಕುಮಾರ್ ಕೃಷ್ಣ ಗೌಡ ಎಂಬವರ ಜಮೀನಿಗೆ ನುಗ್ಗಿ ಬೆಳೆಗಳನ್ನು ತಿಂದು ಹಾಳುಮಾಡುವುದರ ಜೊತೆಗೆ ಹುದುಗೂರು ವ್ಯಾಪ್ತಿಯ ರಸ್ತೆಯ ಬದಿಯಲ್ಲಿನ ಮನೆಗಳ ಅಂಗಳಕ್ಕೆ ನುಗ್ಗಿ ಮನೆಯ ಮುಂಭಾಗದ ಕಬ್ಬಿಣದ ಗೇಟ್ ಅನ್ನು ಮುರಿದು ಹಾಳು ಮಾಡಿದ ಘಟನೆ ನಡೆದಿದೆ.

ಭಯಾಭೀತರಾಗಿರುವ ಗ್ರಾಮಸ್ಥರು ಬೆಂಡೆಬೆಟ್ಟ ಮತ್ತು ಯಡವನಾಡು ಹುದುಗೂರು ಮೀಸಲು ಅರಣ್ಯ ಪ್ರದೇಶಗಳಿಂದ ಕಾಡಾನೆಗಳ ಹಾವಳಿಯಿಂದಾಗಿ ಸಂಚರಿಸುವುದೆ ಕಷ್ಟವಾಗಿದೆ. ಈಗಾಗಲೇ ಕಾಡಾನೆಗಳು ಸಂಜೆ ೬ ಗಂಟೆಯ ಸಮಯದಲ್ಲಿ ಬೈಕ್ ಸವಾರನನ್ನು ಬೆನ್ನತ್ತಿದ ಘಟನೆ ನಡೆದಿದೆ. ಎರಡೂ ಕಡೆಗಳಿಂದಲೂ ಕಾಡಾನೆಗಳ ಕಾಟದಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.