ಪೊನ್ನಂಪೇಟೆ, ಏ. ೩: ರಾಜ್ಯದಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ ಇದ್ದ ಮೀಸಲಾತಿಯನ್ನು ಸರಕಾರ ರದ್ದು ಮಾಡಿದ ನಿರ್ಧಾರ ಸಂವಿಧಾನ ವಿರೋಧಿ ನೀತಿಯಾಗಿದೆ ಎಂದು ಅಭಿಪ್ರಾಯಪಟ್ಟಿರುವ ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.), ಮುಸ್ಲಿಮರಿಗೆ ಪ್ರವರ್ಗ ೨(ಬಿ) ಅಡಿಯಲ್ಲಿದ್ದ ಶೇ. ೪ ರಷ್ಟು ಮೀಸಲಾತಿಯನ್ನು ಕಿತ್ತು ಇನ್ನೊಂದು ಸಮುದಾಯಕ್ಕೆ ಹಂಚುವ ಮೂಲಕ ಮುಸ್ಲಿಂ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಹೇಳಿದೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೊಡವ ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷ ದುದ್ದಿಯಂಡ ಹೆಚ್. ಸೂಫಿ ಹಾಜಿ, ಇದು ಸರ್ಕಾರದ ಅಸಂವಿಧಾನಿಕ ತೀರ್ಮಾನವಾಗಿದೆ. ಮುಸ್ಲಿಮರ ವಿರುದ್ಧ ಸರ್ಕಾರ ನಡೆಸಿದ್ದ ಷÀಡ್ಯಂತ್ರ ಇದಾಗಿದ್ದು, ಜಾತ್ಯತೀತ ನೆಲೆಗಟ್ಟಿನ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಸರ್ಕಾರ ವಿಫಲವಾಗಿದೆ. ಅಲ್ಪಸಂಖ್ಯಾತರ ಹಕ್ಕನ್ನು ಕಿತ್ತುಕೊಳ್ಳುವ ಮಟ್ಟಕ್ಕೆ ಸರಕಾರ ಇಳಿದಿರುವುದು ಖಂಡನಿಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಹಾವನೂರು, ಪ್ರೊ. ರವಿವರ್ಮ ಕುಮಾರ್ ಆಯೋಗ, ಡಾ. ಸಿ.ಎಸ್. ದ್ವಾರಕನಾಥ ಆಯೋಗ ಸೇರಿದಂತೆ ಸ್ವತಂತ್ರ ನಂತರ ಕಳೆದ ೭೫ ವರ್ಷಗಳಲ್ಲಿ ಬಂದಿರುವ ಕೇಂದ್ರದ ಮತ್ತು ರಾಜ್ಯದ ಎಲ್ಲಾ ಆಯೋಗಗಳು ಮುಸ್ಲಿಮರನ್ನು ಹಿಂದುಳಿದ ವರ್ಗ ಎಂದೇ ಗುರುತಿಸಿದೆ. ನ್ಯಾ. ಚಿನ್ನಪರೆಡ್ಡಿ ಆಯೋಗ ನಡೆಸಿದ ಅಧ್ಯಯನದ ಪೂರ್ಣ ವರದಿಯ ಶಿಫಾರಸುಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹಿಂದುಳಿದ ವರ್ಗದಲ್ಲಿ ಶೇ.೪ ಮೀಸಲಾತಿಯನ್ನು ಮುಸ್ಲಿಮರಿಗೆ ಸಂವಿಧಾನಬದ್ಧವಾಗಿ ನೀಡಲಾಗಿತ್ತು. ಆದರೆ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರ ಮುಸ್ಲಿಮರಿಗೆ ನೀಡಿರುವ ಈ ಶೇ. ೪ರ ಮೀಸಲಾತಿಯನ್ನು ಏಕಾಏಕಿ ರದ್ದು ಮಾಡಿರುವುದು ಸರಿಯಲ್ಲ. ಇದು ಸರಕಾರದ ಮಲತಾಯಿ ಧೋರಣೆಯನ್ನು ತೋರಿಸುತ್ತದೆ ಎಂದು ಹೇಳಿದರು.
ಓಬಿಸಿ ೨(ಬಿ) ಪ್ರವರ್ಗದಡಿ ಮುಸ್ಲಿಮರು ಪಡೆಯುತ್ತಿದ್ದ ಮೀಸಲಾತಿಯನ್ನು ಇದೀಗ ಆರ್ಥಿಕವಾಗಿ ದುರ್ಬಲ ವರ್ಗದ (ಇ.ಡಬ್ಲ್ಯೂ.ಎಸ್.) ವ್ಯಾಪ್ತಿಗೆ ತರಲಾಗಿದೆ. ಓಬಿಸಿ ೨(ಬಿ) ಪ್ರವರ್ಗದಡಿ ಸಾಮಾಜಿಕವಾಗಿಯೂ ಹಿಂದುಳಿದ ಮುಸ್ಲಿಮರು ಈ ಹೊಸ ಮೀಸಲು ನೀತಿಯಿಂದ ಬರೀ ಆರ್ಥಿಕವಾಗಿ ಮಾತ್ರ ಹಿಂದುಳಿದ ಸಮುದಾಯವಾಗಿ ಪರಿಗಣಿಸಲ್ಪಡುತ್ತದೆ. ಜಾತಿಯ ಆಧಾರದ ಶೋಷಣೆಗೂ ಬಡತನದ ಆಧಾರದ ಶೋಷಣೆಗೂ ಸಾಕಷ್ಟು ವ್ಯತ್ಯಾಸವಿದೆ ಎಂದು ಅಭಿಪ್ರಾಯ ಪಟ್ಟಿರುವ ಸೂಫಿ ಹಾಜಿ, ಮುಸ್ಲಿಮರ ಹಿಂದುಳಿವಿಕೆಯ ಹಿಂದೆ ಆರ್ಥಿಕತೆಗೂ ಮೀರಿದ ಸಾಮಾಜಿಕ ಸ್ಥಿತಿಗತಿಗಳ ಕಾರಣ ಕೂಡ ಪ್ರಮುಖವಾದದ್ದು ಎಂದು ಹೇಳಿದರು.
ಕರ್ನಾಟಕದಲ್ಲಿ ಮುಸ್ಲಿಮರು ಕೇವಲ ಉದ್ಯೋಗ, ಶಿಕ್ಷಣ ಮತ್ತು ಆರ್ಥಿಕವಾಗಿ ಮಾತ್ರ ಹಿಂದುಳಿದ ಸಮುದಾಯವಲ್ಲ. ಮುಸ್ಲಿಮರು ಸಾಮಾಜಿಕವಾಗಿಯೂ ಶೋಷಿತ ಸಮುದಾಯವಾಗಿದೆ. ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಎಲ್ಲ ಸಮುದಾಯಗಳ ಹಿತ ಕಾಯುವುದು ಸರಕಾರದ ಮೊದಲ ಆದ್ಯತೆಯಾಗಿದೆ. ಆದರೆ ಕರ್ನಾಟಕದಲ್ಲಿ ಮುಸ್ಲಿಮರನ್ನು ಮಾತ್ರ ಗುರಿಯಾಗಿಸಿ ಮೀಸಲಾತಿ ಯನ್ನು ರದ್ದುಪಡಿಸಿರುವುದು ತೀರಾ ನೋವಿನ ಸಂಗತಿ ಎಂದು ತಿಳಿಸಿದ ಸೂಫಿ ಹಾಜಿ, ಇದರಿಂದಾಗಿ ಮುಸ್ಲಿಮರು ಶಿಕ್ಷಣ ಮತ್ತು ಉದ್ಯೋಗದಿಂದ ತೀರ ವಂಚಿತರಾಗಲಿದ್ದಾರೆ. ಹಾಗಾದರೆ ಈ ವಂಚನೆಯ ಜವಾಬ್ದಾರಿಯನ್ನೂ ಸರಕಾರವೇ ಹೊರಬೇಕಲ್ಲವೇ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.
ಡಾ. ಗೋಪಾಲ್ ಸಿಂಗ್, ಜಸ್ಟೀಸ್ ರಾಜೇಂದ್ರ ಸಾಚಾರ್, ಜಸ್ಟಿಸ್ ರಂಗನಾಥ್ ಮಿಶ್ರಾ ವರದಿಗಳ ಪ್ರಕಾರ ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ದಲಿತರಿಗಿಂತಲೂ ಹಿಂದುಳಿದಿರುವ ಮುಸ್ಲಿಮರನ್ನು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಅತ್ಯಂತ ಮುಂದುವರೆದು ಇ.ಡಬ್ಲ್ಯೂ.ಎಸ್. ಮೂಲಕ ಮೀಸಲಾತಿ ಪಡೆಯುತ್ತಿರುವ ಮೇಲ್ವರ್ಗ ಸಮುದಾಯದವರ ಜೊತೆ ಸ್ಪರ್ಧೆಯೊಡ್ಡಿಸಿ ಮುಸ್ಲಿಮರನ್ನು ಸಾರ್ವಜನಿಕ ಕ್ಷೇತ್ರಗಳಿಂದಲೇ ಸಂಪೂರ್ಣವಾಗಿ ಇಲ್ಲವಾಗಿಸುವ ಬಹುದೊಡ್ಡ ಹುನ್ನಾರ ಈ ಮೀಸಲಾತಿ ನೀತಿಯಲ್ಲಿ ಅಡಗಿದೆ ಎಂದು ಸೂಫಿ ಹಾಜಿ ಆತಂಕ ವ್ಯಕ್ತಪಡಿಸಿದರು.
ಮುಸ್ಲಿಮರಿಗೆ ೨ (ಬಿ) ಪ್ರವರ್ಗದಡಿ ಮೀಸಲಾತಿ ನೀಡಿರುವುದು ಧರ್ಮದ ಆಧಾರದಲ್ಲಿ ಅಲ್ಲ. ಆರ್ಥಿಕತೆಯ ಜೊತೆಗೆ ಸಾಮಾಜಿಕವಾಗಿಯು ಮುಸ್ಲಿಮರು ಹಿಂದುಳಿದ್ದರಿAದ ಈ ಮೀಸಲಾತಿ ನೀಡಲಾಗಿದೆ. ೧೯೬೧ರ ನಾಗನಗೌಡ ಸಮಿತಿ, ವೆಂಕಟಸ್ವಾಮಿ ಆಯೋಗ ೧೯೯೦ರ ಚಿನ್ನಪ್ಪ ರೆಡ್ಡಿ ಆಯೋಗ ಕೂಡ ಮುಸ್ಲಿಮರನ್ನು ಹಿಂದುಳಿದ ವರ್ಗಗಳಿಗೆ ಸೇರಿಸಿರುವುದನ್ನು ಎತ್ತಿ ಹಿಡಿದಿದೆ. ಆದರಿಂದ ಮುಸ್ಲಿಮರ ೨ (ಬಿ) ಪ್ರವರ್ಗದ ಮೀಸಲಾತಿಯನ್ನು ಶೇ. ೫ಕ್ಕೆ ಹೆಚ್ಚಿಸಿ ರಾಜ್ಯದಲ್ಲಿ ಅದನ್ನು ಯಥಾವತ್ತಾಗಿ ಮುಂದುವರಿಸುವAತೆ ಕೊಡವ ಮುಸ್ಲಿಂ ಅಸೋಸಿಯೇಷನ್ ಒತ್ತಾಯಿಸುತ್ತದೆ ಎಂದು ಅವರು ಹೇಳಿದರು.
ಗೋಷ್ಠಿಯಲ್ಲಿ ಸಂಸ್ಥೆಯ ಹಿರಿಯ ಉಪಾಧ್ಯಕ್ಷರಾದ ಆಲೀರ ಎ. ಅಹಮದ್ ಹಾಜಿ, ನಿರ್ದೇಶಕರಾದ ಕುವೆಂಡ ವೈ. ಆಲಿ, ಚಿಮ್ಮಿಚ್ಚಿರ ಕೆ. ಇಬ್ರಾಹಿಂ (ಉಮ್ಮಣಿ) ಮತ್ತು ಎಂ.ಕೆ. ಮುಸ್ತಫಾ ಉಪಸ್ಥಿತರಿದ್ದರು.