ಶನಿವಾರಸಂತೆ, ಏ. ೪: ಹೋಬಳಿಯಾದ್ಯಂತ ದಿನದಿಂದ ದಿನಕ್ಕೆ ಬಿರು ಬಿಸಿಲಿನ ವಾತಾವರಣ. ತಾಪಮಾನ ಹೆಚ್ಚಾಗುತ್ತಿದ್ದು ನಿರೀಕ್ಷೆಯಂತೆ ಮಾರ್ಚ್ ತಿಂಗಳಲ್ಲಿ ವಾಡಿಕೆ ಮಳೆಯಾಗದೇ ಕಾಫಿ ಬೆಳೆಗಾರರ ಮೊಗದಲ್ಲಿ ಆತಂಕ ಮನೆ ಮಾಡಿದೆ. ವರುಣದೇವನ ಕೃಪೆಗಾಗಿ ಹಂಬಲಿಸು ವಂತಾಗಿದೆ.

ಯುಗಾದಿ ಹಬ್ಬದ ನಂತರ ಸುರಿಯುತ್ತಿದ್ದ ರೇವತಿ ಮಳೆಯೂ ಸುರಿಯದೆ ಕಾಫಿ ಗಿಡಗಳು ಬಿಸಿಲಿನ ಬೇಗೆಗೆ ಬಾಡಿ ನಿಂತಿವೆ. ನಿಗದಿತ ಸಮಯಕ್ಕೆ ಸರಿಯಾಗಿ ಮಳೆಯಾಗದಿದ್ದರೆ ತೋಟಗಳಲ್ಲಿ ಹಾಲು ಚೆಲ್ಲಿದಂತೆ ಕಾಫಿ ಹೂವುಗಳರಳಿ ಕಂಪು ಸೂಸಬೇಕಾಗಿತ್ತು. ಆದರೆ ಹವಾಮಾನ ವೈಪರಿತ್ಯದಿಂದ ಬೆಳೆಗಾರರು ಕಂಗಾಲಾಗಿ ಆಕಾಶದತ್ತ ಮೊಗ ಮಾಡಿದ್ದಾರೆ.

ಅನುಕೂಲಸ್ಥರಾದ, ನೀರಿನ ಸೌಲಭ್ಯ ಇರುವ ಕೆಲವು ಸದೃಢ ಬೆಳೆಗಾರರು ಮಾತ್ರ ಕೆರೆ, ಹೊಳೆ, ಕೊಳವೆ ಬಾವಿಯ ನೀರನ್ನು ಬಳಸಿಕೊಂಡು ಸ್ಪಿçಂಕ್ಲರ್ ಮೂಲಕ ತೋಟದ ಗಿಡಗಳಿಗೆ ನೀರು ಹಾಯಿಸುತ್ತಿದ್ದು ರೋಬಸ್ಟ್ ಕಾಫಿ ಹೂವುಗಳರಳಿ ಘಮಘಮಿಸುತ್ತಿವೆ. ಆದರೆ, ನಿರಂತರ ನೀರು ಹಾಯಿಸುವಿಕೆ ಸಾಧ್ಯವಾಗದ ಕಾರಣ ಹೂವುಗಳು ಬಾಡಿ ಹೋಗುತ್ತಿವೆ..

“ಬಿರು ಬಿಸಿಲಿನ ಪರಿಣಾಮದಿಂದ ನೀರಿನ ಮೂಲ ಬತ್ತಿ ಹೋಗುತ್ತಿವೆ. ಅಂತರ್ಜಲ ಮಟ್ಟ ಕುಸಿದಿದೆ. ಹೊಳೆ, ಕೆರೆ, ಬಾವಿಗಳಲ್ಲೂ ನೀರು ಬತ್ತಿ ಹೋಗುತ್ತಿವೆ. ಈ ಸಮಯದಲ್ಲಿ ಮಳೆಯಾಗಬೇಕು. ೫-೧೦ ಸೆಂಟ್ ಮಳೆಯಾದರೆ ಪ್ರಯೋಜನವಿಲ್ಲ. ಒಂದೆರೆಡು ಇಂಚು ಮಳೆಯಾದರೆ ಭೂಮಿಯಲ್ಲಿ ನೀರು ಹರಿಯುವಂತಾದರೆ ಮಾತ್ರ ಕಾಫಿ ಹೂ ಚೆನ್ನಾಗಿ ಅರಳುತ್ತದೆ. ವರ್ಷದ ಮೊದಲ ರೇವತಿ ಮಳೆ ಸುರಿಯದಿದ್ದರೆ ಅರೇಬಿಕಾ ಕಾಫಿ ಹೂ ಅರಳುತ್ತಿತ್ತು. ಇದೀಗ ಬಿಸಿಲ ಬೇಗೆಯಿಂದ ಗಿಡಗಳು ಸುಟ್ಟು ಹೋಗುತ್ತಿದ್ದು ವಾರದೊಳಗೆ ಮಳೆಯಾಗದಿದ್ದರೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿ ಸಮಸ್ಯೆ ಎದುರಿಸಬೇಕಾಗುತ್ತದೆ’ ಎಂದು ಅಪ್ಪಶೆಟ್ಟಳ್ಳಿ ಗ್ರಾಮದ ಬೆಳೆಗಾರ ರಕ್ಷಿತ್ ಹಾಗೂ ಇತರ ಬೆಳೆಗಾರರು ತಮ್ಮ ಅಳಲು ತೋಡಿಕೊಂಡರು.

ಕೆಲ ತಿಂಗಳ ಹಿಂದೆ ತೋಟಗಳಲ್ಲಿ ಕಾಡಾನೆಗಳ ದಾಂಧಲೆಯಿAದ ಬೆಳೆ ಹಾನಿ ಅನುಭವಿಸಿದ್ದ ಬೆಳೆಗಾರರು ಇದೀಗ ವಾಡಿಕೆ ಮಳೆ ಸುರಿಯದಿದ್ದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಕಾಲಕ್ಕೆ ಮಳೆಯಾಗದೆ, ಕಾಫಿ ಹೂ ಅರಳದೆ ಉತ್ತಮ ಫಸಲು ನಿರೀಕ್ಷೆ ಬೆಳೆಗಾರರಿಗೆ ಮರೀಚಿಕೆಯಾಗಿದೆ. - ಶ.ಗ. ನಯನತಾರಾ, ಶನಿವಾರಸಂತೆ.