ಮಡಿಕೇರಿ, ಏ. ೪: ಕೊಡವ ಕುಲಶಾಸ್ತç ಅಧ್ಯಯನ ವಿಚಾರದಲ್ಲಿ ಕೊಡವ ಭಾಷಿಕ ಜನಾಂಗಗಳನ್ನು ಕಾಡು ಬೆಕ್ಕಿಗೆ ಹೋಲಿಸಿ ಕೊಡವ ಸ್ವಯಂ ಘೋಷಿತ ನಾಯಕರೊಬ್ಬರು ಜನಾಂಗೀಯ ತಾರತಮ್ಯದ ಹೇಳಿಕೆ ನೀಡಿರುವುದನ್ನು ಸೇವ್ ಕೊಡಗು ವೇದಿಕೆ ಖಂಡಿಸುತ್ತದೆ ಎಂದು ವೇದಿಕೆಯ ಪದಾಧಿಕಾರಿ ಕೆ.ಬಿ. ಬೋಪಣ್ಣ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕೊಡವ ಭಾಷಾ ಜಗತ್ತಿನೊಳಗೆ ಸುಮಾರು ಹದಿನೆಂಟು ಸಮುದಾಯಗಳಿವೆ. ಅದರಲ್ಲಿ ಜನಸಂಖ್ಯೆ ಮತ್ತು ಚಾರಿತ್ರಿಕ ಕಾರಣಗಳಿಂದಾಗಿ ಕೊಡವರು ಪ್ರಬಲರಾಗಿ ಗುರುತಿಸಿಕೊಂಡಿದ್ದಾರೆ. ಶತಮಾನಗಳಿಂದ ಎಲ್ಲಾ ಸಮುದಾಯಗಳಿಗೂ ಧಾರ್ಮಿಕ ಮತ್ತು ಸಾಮಾಜಿಕ ಆಚರಣೆಗಳಲ್ಲಿ ಮತ್ತು ಆರ್ಥಿಕ ಚಟುವಟಿಕೆಗಳಲ್ಲಿ ನಿರ್ದಿಷ್ಟ ಜವಾಬ್ದಾರಿಗಳಿದ್ದವು. ಕೆಲವು ಜವಾಬ್ದಾರಿಗಳು ಈಗಲೂ ಮುಂದುವರಿಯುತ್ತಿವೆ.
ಹೀಗಿರುವಾಗ ಕೊಡವ ನಾಯಕ ಎಂದು ಸ್ವಯಂ ಘೋಷಿಸಿಕೊಂಡ ವ್ಯಕ್ತಿಯೊಬ್ಬರು ಕಳೆದ ಮೂರೂವರೆ ದಶಕಗಳಿಂದ ಕೊಡವ ಜನಾಂಗದಲ್ಲಿ ಕೃತಕ ಗುರುತಿನ ಬಿಕ್ಕಟ್ಟನ್ನು ಸೃಷ್ಟಿಸಿ, ಅದಕ್ಕೆ ಕಾರಣವನ್ನು ಕೊಡಗಿನಲ್ಲಿ ವಾಸಿಸುವ ಇತರ ಸಮುದಾಯಗಳ ಮೇಲೆ ಹೊರಿಸಿ, ಮುಗ್ಧ ಕೊಡವ ಮನಸ್ಸುಗಳನ್ನು ಭಾವನಾತ್ಮಕವಾಗಿ ಪ್ರಚೋದಿಸಿ ಇತರ ಜನಾಂಗಗಳ ಮೇಲೆ ಎತ್ತಿಕಟ್ಟುವ ವಿಫಲ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಕುಲ, ಗೋತ್ರಗಳಿಲ್ಲದ ಸಂಸ್ಕೃತಿ, ಆಚಾರ-ವಿಚಾರ, ನಡೆ, ನುಡಿ, ಪದ್ಧತಿ, ಪರಂಪರೆ ಎಲ್ಲವೂ ಒಂದೇ ಆಗಿರುವ ಕೊಡವ ಭಾಷಿಕ ಜನಾಂಗಗಳಲ್ಲಿ ಯಾರು ಶ್ರೇಷ್ಟರು ಮತ್ತು ಯಾಕೆ, ಹೇಗೆ ಶ್ರೇಷ್ಠರು ಹಾಗೂ ಯಾರು ಹೀನರು ಮತ್ತು ಯಾಕೆ ಹೇಗೆ ಎಂಬುದನ್ನು ಸಮರ್ಥವಾಗಿ ವಿವರಿಸಲು ಸಾದ್ಯವಾಗದೇ ಜನಾಂಗೀಯ ತಾರತಮ್ಯದಂತಹ ಕೃತ್ಯಕ್ಕೆ ಇಳಿದಿರುವುದು ಅವರ ಬೌದ್ಧಿಕ ದೀವಾಳಿತನವನ್ನು ತೋರಿಸುತ್ತದೆ. ಪ್ರತ್ಯೇಕ ರಾಜ್ಯ ಹೋರಾಟದಿಂದ ಶ್ರೇಷ್ಠ ಜನಾಂಗಕ್ಕೆ ಪರಿಶಿಷ್ಟ ಪಂಗಡದ ಹಣೆಪಟ್ಟಿ ಕಟ್ಟುವ ಹೋರಾಟಗಳವರೆಗೆ ಅನುಭವಿಸಿದ ಸೋಲನ್ನು ಜೀರ್ಣಿಸಿಕೊಳ್ಳಲಾಗದೆ ಅವರು ಇಂತಹ ಕೃತ್ಯಕ್ಕೆ ಮುಂದಾಗಿದ್ದಾರೆ ಎಂದು ಟೀಕಿಸಿದರು.
ರಾಜ್ಯ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿದ್ದು, ಕೊಡಗಿನಲ್ಲಿ ವಿವಿಧ ಸಮುದಾಯಗಳ ಸಾಮರಸ್ಯಕ್ಕೆ ಒತ್ತು ನೀಡುವ ಮತ್ತು ಕೊಡಗಿನ ಅಭಿವೃದ್ಧಿಯಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ ಅಭ್ಯರ್ಥಿಯನ್ನು ಪಕ್ಷಾತೀತವಾಗಿ ಆಯ್ಕೆ ಮಾಡಿದರೆ ಭ್ರಷ್ಟಾಚಾರ ರಹಿತ ಸ್ವಚ್ಛ ಆಡಳಿತ ಪಡೆಯಲು ಸಾಧ್ಯವಾಗುತ್ತದೆ. ಕೊಡಗಿನ ಮತದಾರರು ಈ ಬಗ್ಗೆ ಚಿಂತಿಸಬೇಕೆAದು ಬೋಪಣ್ಣ ಮನವಿ ಮಾಡಿದರು. ಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಬಿ.ಟಿ. ದಿನೇಶ್, ಜಿನ್ನು ನಾಣಯ್ಯ ಉಪಸ್ಥಿತರಿದ್ದರು.