ಸೋಮವಾರಪೇಟೆ, ಏ. ೩: ಯಂಗ್ ಇಂಡಿಯನ್ ಫಾಮರ‍್ಸ್ ಅಸೋಸಿಯೇಷನ್ ವತಿಯಿಂದ ಸಮೀಪದ ಆಲೂರು ಸಿದ್ದಾಪುರ ಆರೋಗ್ಯ ಕೇಂದ್ರದ ಸಿಬ್ಬಂದಿಗಳಿಗೆ ಟೋಪಿಗಳನ್ನು ವಿತರಿಸಲಾಯಿತು.
ಆರೋಗ್ಯ ಇಲಾಖಾ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು ಬಿರು ಬಿಸಿಲಿನಲ್ಲಿ ಮನೆ ಮನೆಗೆ ತೆರಳಿ ಆರೋಗ್ಯ ಇಲಾಖೆಯ ಮಾಹಿತಿಗಳನ್ನು ತಿಳಿಸುವ ಹಾಗೂ ಗಣತಿ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಸಂಘಟನೆಯ ವತಿಯಿಂದ ಟೋಪಿಗಳನ್ನು ವಿತರಿಸಲಾಗಿದೆ ಎಂದು ಯಿಫಾ ಅಧ್ಯಕ್ಷ, ವಕೀಲ ಶ್ರೀನಿಧಿ ಲಿಂಗಪ್ಪ ತಿಳಿಸಿದರು.
ಪ್ರಸ್ತುತ ಭಾರೀ ಬಿಸಿಲಿದ್ದು, ಇಂತಹ ಹವಾಮಾನದ ನಡುವೆಯೂ ಆಶಾ ಕಾರ್ಯಕರ್ತೆಯರು ಗ್ರಾಮಗಳಿಗೆ ಭೇಟಿ ನೀಡಿ ಸೇವೆ ಸಲ್ಲಿಸುತ್ತಿದ್ದಾರೆ. ಆಲೂರು ಸಿದ್ದಾಪುರ ಆರೋಗ್ಯ ಕೇಂದ್ರಕ್ಕೆ ಒಳಪಟ್ಟ ೩೫ ಸಿಬ್ಬಂದಿಗಳಿಗೆ ಟೋಪಿ ನೀಡಲಾಗಿದೆ ಎಂದು ಕಾರ್ಯದರ್ಶಿ ಸಜನ್ ಮಂದಣ್ಣ ಹೇಳಿದರು.
ಈ ಸಂದರ್ಭ ಕೇಂದ್ರದ ಆರೋಗ್ಯಾಧಿಕಾರಿ ಡಾ.ಸುಪರ್ಣ ಕೃಷ್ಣಾನಂದ್, ಯಿಫಾ ಸಂಘಟನೆಯ ಆದರ್ಶ್ ತಮ್ಮಯ್ಯ, ಚಿರಂಜೀವಿ ಇದ್ದರು.