ಕೂಡಿಗೆ, ಏ. ೨: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಕೈಗಾರಿಕಾ ಪ್ರದೇಶ ಸುಂದರನಗರ ಗ್ರಾಮದ ಸರ್ವೆ ನಂ ೫/೧ ರಲ್ಲಿನ ೧.೨೦ ಎಕರೆ ಜಾಗವನ್ನು ಸ್ಮಶಾನ ಉದ್ದೇಶಕ್ಕೆ ಮೀಸಲಿಡುವಂತೆ ಗ್ರಾಮಸ್ಥರು ತಹಶೀಲ್ದಾರ್ಗೆ ಮನವಿ ಸಲ್ಲಿಸಿದರು.
ಜಾಗದಲ್ಲಿ ಜವರಪ್ಪನಾಯಕ ಹೆಸರಿನ ಕೆರೆಯಿದೆ. ಸರಕಾರದಿಂದ ಕೆರೆ ಹೂಳೆತ್ತುವ ಕಾರ್ಯ ನಡೆದಿತ್ತು. ೪೦-೫೦ ವರ್ಷಗಳಿಂದ ಶವ ಸಂಸ್ಕಾರಕ್ಕೆ ಈ ಜಾಗ ಬಳಸಲಾಗುತ್ತಿತ್ತು.
ಕೋವಿಡ್ ಸಂದರ್ಭದಲ್ಲಿ ಕೂಡ ಇಲ್ಲಿ ಶವಸಂಸ್ಕಾರ ನಡೆಸಲಾಗಿತ್ತು. ಇದೀಗ ಈ ಪ್ರದೇಶವನ್ನು ಕೈಗಾರಿಕಾ ಅಭಿವೃದ್ಧಿ ನಿಗಮ ಗ್ರಾಮಸ್ಥರಿಗೆ ಮಾಹಿತಿ ನೀಡದೆ ಸ್ವಾಧೀನಪಡಿಸಿಕೊಂಡು ಖಾಸಗಿ ವ್ಯಕ್ತಿಗೆ ಮಾರಾಟ ಮಾಡಿದೆ. ಅವರು ಸ್ಮಶಾನ ಜಾಗಕ್ಕೆ ಬೇಲಿ ಅಳವಡಿಸಿದ್ದಾರೆ ಎಂದು ಗ್ರಾಮಸ್ಥರಾದ ಮಂಜುನಾಥ್, ಲೋಕೇಶ್, ಕಾಳಿಮುತ್ತು, ವೆಂಕಟೇಶ್, ದೀಪಕುಮಾರ್, ಆಶಾ ವೆಂಕಟೇಶ್, ಜ್ಯೋತಿ, ಪ್ರಮೀಳ, ರಾಜು ತಹಶೀಲ್ದಾರ್ ಗಮನಕ್ಕೆ ತಂದರು.