ಸೋಮವಾರಪೇಟೆ, ಏ. ೨: ರಾಜ್ಯ ವಿಧಾನಸಭೆಗೆ ಚುನಾವಣಾ ದಿನಾಂಕ ಘೋಷಣೆಯಾದ ಹಿನ್ನೆಲೆ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಈ ಹಿನ್ನೆಲೆ ಪಟ್ಟಣ ಪಂಚಾಯಿತಿಯ ವಿವಿಧೆಡೆ ಅಳವಡಿಸಲಾಗಿದ್ದ ರಾಜಕೀಯ ಮುಖಂಡರ ಭಾವಚಿತ್ರ ಹೊಂದಿರುವ ಪ್ರಚಾರ ಫಲಕಗಳನ್ನು ತೆರವುಗೊಳಿಸಲಾಗುತ್ತಿದೆ. ಜನಪ್ರತಿನಿಧಿಗಳು, ರಾಜಕಾರಣಿಗಳು, ಜನಪ್ರತಿನಿಧಿಗಳ ಭಾವಚಿತ್ರ ಒಳಗೊಂಡಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆ/ಯೋಜನೆಗಳ ಪ್ರಚಾರ ಫಲಕಗಳನ್ನು ಪಟ್ಟಣದ ಅಲ್ಲಲ್ಲಿ ಅಳವಡಿಸಲಾಗಿದ್ದು, ನೀತಿ ಸಂಹಿತೆ ಘೋಷಣೆ ಹಿನ್ನೆಲೆ ಪ.ಪಂ. ಸಿಬ್ಬಂದಿಗಳು ತೆರವುಗೊಳಿಸುತ್ತಿದ್ದಾರೆ. ಇಲ್ಲಿನ ಜೇಸೀ ವೇದಿಕೆ ಮುಂಭಾಗ ಇರುವ ಶುದ್ಧ ಕುಡಿಯುವ ನೀರಿನ ಘಟಕ, ಕಕ್ಕೆಹೊಳೆ ಬಳಿಯಿರುವ ನೀರಿನ ಘಟಕ, ಬಸ್ ನಿಲ್ದಾಣ ಸೇರಿದಂತೆ ಇತರೆಡೆಗಳಲ್ಲಿ ಕ್ಷೇತ್ರದ ಶಾಸಕರು, ಪ್ರಧಾನಿ, ಮುಖ್ಯಮಂತ್ರಿ ಸೇರಿದಂತೆ ಇತರ ಸಚಿವರುಗಳ ಭಾವಚಿತ್ರ ಇದ್ದ ಫಲಕಗಳನ್ನು ಸಿಬ್ಬಂದಿಗಳು ಪ್ಲಾಸ್ಟಿಕ್‌ನಿಂದ ಮುಚ್ಚಿದರು. ಅಂತೆಯೇ ತಾತ್ಕಾಲಿಕವಾಗಿ ಅಳವಡಿಸಿದ್ದ ಪ್ರಚಾರ ಫಲಕಗಳನ್ನು ತೆರವುಗೊಳಿಸಿದರು.