ಕುಶಾಲನಗರ, ಏ. ೨: ರಸ್ತೆ ಬದಿಯಲ್ಲಿ ಇಟ್ಟಿದ್ದ ತಳ್ಳುವ ಗಾಡಿಯನ್ನು ಕಳವು ಮಾಡಿದ ಪ್ರಕರಣ ಕುಶಾಲನಗರ ಸಮೀಪದ ಕೊಪ್ಪದಲ್ಲಿ ನಡೆದಿದೆ.
ಕೊಪ್ಪ ಹೆದ್ದಾರಿ ಬದಿಯಲ್ಲಿ ಪಾನಿಪುರಿ ಮತ್ತಿತರ ತಿಂಡಿ ಮಾರಾಟ ಮಾಡುತ್ತಿದ್ದ ಕುಶಾಲನಗರದ ಕಿಶನ್ ಎಂಬವರಿಗೆ ಸೇರಿದ ಅಂಬಿಕಾ ಎಂಬ ಹೆಸರಿನ ನೂತನ ತಳ್ಳುವ ಗಾಡಿ ಕಳವಾಗಿದೆ ಎಂದು ಬೈಲಕುಪ್ಪೆ ಪೊಲೀಸರಿಗೆ ದೂರು ನೀಡಿದ್ದಾರೆ. ಸುಮಾರು ೮೫ ಸಾವಿರ ರೂ.ಗಳ ಮೌಲ್ಯದ ನಷ್ಟ ಉಂಟಾಗಿದೆ ಎಂದು ತಿಳಿಸಿದ್ದಾರೆ.
ಪೊಲೀಸರು ರಸ್ತೆ ಬದಿಯ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದ ಸಂದರ್ಭ ರಾತ್ರಿ ೨ ಗಂಟೆ ವೇಳೆಗೆ ಪಿಕಪ್ ವಾಹನದಲ್ಲಿ ತಳ್ಳುವ ಗಾಡಿಯನ್ನು ತುಂಬಿ ಕೊಪ್ಪದಿಂದ ಬೈಲುಕೊಪ್ಪ ಕಡೆಗೆ ಹೋಗುತ್ತಿದ್ದ ದೃಶ್ಯ ಗೋಚರಿಸಿದೆ. ಪಿಕಪ್ ವಾಹನದ ನೊಂದಣಿ ಸಂಖ್ಯೆ ಅಸ್ಪಷ್ಟವಾಗಿ ಗೋಚರಿಸಿದ್ದು ಬೈಲಕೊಪ್ಪೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
- ಸಿಂಚು