*ಗೋಣಿಕೊಪ್ಪ, ಏ.೩: ದಕ್ಷಿಣ ಕೊಡಗು ಒಕ್ಕಲಿಗರ ಯುವ ವೇದಿಕೆ ವತಿಯಿಂದ ಹಾತೂರು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಮೈದಾನದಲ್ಲಿ ಏಪ್ರಿಲ್ ೨೫ ರಿಂದ ಮೂರು ದಿನ ಒಕ್ಕಲಿಗರ ಕ್ರೀಡಾ ಕಲರವ ಆಯೋಜಿಸಲಾಗಿದೆ ಎಂದು ವೇದಿಕೆ ಅಧ್ಯಕ್ಷ ವಿ.ಪಿ. ಡಾಲು ತಿಳಿಸಿದರು.

ಗೋಣಿಕೊಪ್ಪ ಪ್ರೆಸ್‌ಕ್ಲಬ್‌ನಲ್ಲಿ ಕಾರ್ಯಕ್ರಮದ ಪಟ್ಟಿ ಬಿಡುಗಡೆ ಗೊಳಿಸಿ ಮಾತನಾಡಿ, ಏಪ್ರಿಲ್ ೨೫, ೨೬ ಮತ್ತು ೨೭ ರಂದು ಕ್ರೀಡಾ ಕಲರವ ನಡೆಯಲಿದ್ದು, ಪೊನ್ನಂಪೇಟೆ ಮತ್ತು ವೀರಾಜಪೇಟೆ ತಾಲೂಕು ವ್ಯಾಪ್ತಿಯಲ್ಲಿರುವ ಒಕ್ಕಲಿಗ ಜನಾಂಗ ದವರು ಪಾಲ್ಗೊಳ್ಳಬಹುದಾಗಿದೆ. ಮಹಿಳೆಯರಿಗೆ ಕ್ರೀಡೆಯಲ್ಲಿ ಮತ್ತಷ್ಟು ಅವಕಾಶ ನೀಡಲು ತವರು ಮನೆಯ ಗ್ರಾಮದ ಹೆಸರಿನಲ್ಲಿ ಆಡಲು ಮುಕ್ತ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು. ಪುರುಷರಿಗೆ ಕ್ರಿಕೆಟ್, ೭ ಜನರ ತಂಡದ ಹಗ್ಗಜಗ್ಗಾಟ, ೪೫ ವರ್ಷ ಮೇಲ್ಪಟ್ಟವರಿಗೆ ಭಾರದ ಗುಂಡು ಎಸೆತ, ಬಾಂಬ್ ಇನ್ ದಿ ಸಿಟಿ ಸ್ಪರ್ಧೆ ನಡೆಯಲಿದೆ. ಮಹಿಳೆ ಯರಿಗೆ ವಿವಾಹಿತರಿಗೆ ಬೆಂಕಿ ರಹಿತ ಅಡುಗೆ, ೭ ಜನರ ತಂಡಕ್ಕೆ ಹಗ್ಗ ಜಗ್ಗಾಟ, ಬಾಂಬ್ ಇನ್ ದಿ ಸಿಟಿ ಸ್ಪರ್ಧೆ ಆಯೋಜಿಸಲಾಗಿದೆ. ೨, ೬, ೧೧ ವಯೋಮಿತಿಯ ಮಕ್ಕಳಿಗೆ ಫಾನ್ಸಿ ಡ್ರೆಸ್, ಮನರಂಜನಾ ಕ್ರೀಡೆಗಳು, ಸೂಪರ್ ಸಂಸಾರ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ವಿಜೇತ ಕ್ರಿಕೆಟ್ ತಂಡಕ್ಕೆ ರೂ. ೫೦ ಸಾವಿರ, ರೂ. ೨೫ ಸಾವಿರ ನಗದು, ಹಗ್ಗಜಗ್ಗಾಟ ವಿಜೇತರಿಗೆ ರೂ. ೧೫, ರೂ. ೧೦ ಸಾವಿರ ನಗದು ಬಹುಮಾನ ನೀಡಲಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭ ವೇದಿಕೆ ಉಪಾಧ್ಯಕ್ಷ ಕೆ.ಪಿ. ಅಜಿತ್, ಪ್ರಧಾನ ಕಾರ್ಯದರ್ಶಿ ವಿ.ಟಿ. ಶ್ರೇಯಸ್, ಖಜಾಂಚಿ ಚಿದು, ಕ್ರೀಡಾ ಸಂಚಾಲಕರಾದ ವಿ.ಎನ್. ಪ್ರಮೋದ್, ಡಿ.ಜಿ. ನಿಖಿಲ್, ಸಹ ಸಂಚಾಲಕ ವಿ.ಎಸ್. ಕಿರಣ್, ನಿರ್ದೇಶಕ ವಿ.ಜಿ. ಮದುಸೂದನ್ ಇದ್ದರು.