*ಗೋಣಿಕೊಪ್ಪ, ಏ. ೨: ಪೊನ್ನಂಪೇಟೆ ನಿನಾದ ವಿದ್ಯಾಸಂಸ್ಥೆಯಲ್ಲಿ ಕ್‌ಗ್ಗಟ್ಟ್ನಾಡ್ ಹಿರಿಯ ನಾಗರಿಕ ವೇದಿಕೆ ಮತ್ತು ನಿನಾದ ವಿದ್ಯಾಸಂಸ್ಥೆ ಸಹಯೋಗದಲ್ಲಿ ಎಪ್ರಿಲ್ ೭ ಮತ್ತು ೮ ರಂದು ಆಯೋಜಿಸಿರುವ ‘ಉಮ್ಮತ್ ಬೊಳಕ್’ ಕಾರ್ಯಕ್ರಮದಲ್ಲಿ ೧೮ ತಂಡಗಳು ಭಾಗವಹಿಸಲಿವೆ ಎಂದು ವೇದಿಕೆ ಅಧ್ಯಕ್ಷ ಕೊಟ್ಟ್ಕತ್ತಿರ ಸೋಮಣ್ಣ ತಿಳಿಸಿದರು.

ಕೊಡವ ಭಾಷಿಕ ಜನಾಂಗಗಳ ಉಮ್ಮತ್ತಾಟ್ ತಂಡ, ಗ್ರಾಮಗಳ ಹೆಸರಿನಲ್ಲಿ ಬೊಳಕಾಟ್ ತಂಡವು ಸ್ಪರ್ಧಿಸಲಿದ್ದು, ಎರಡು ವಿಭಾಗಕ್ಕೂ ತಲಾ ೯ ತಂಡಗಳು ಪಾಲ್ಗೊಳ್ಳಲಿವೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೊಡವ ಭಾಷಿಕ ಜನಾಂಗಗಳ ಕಲೆಗೆ ಪ್ರೋತ್ಸಾಹಕ್ಕೆ ವೇದಿಕೆಯಾಗಿದ್ದು, ಬೊಳಕಾಟ್ ತಂಡವು ಗ್ರಾಮಗಳ ಹೆಸರಿನಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿದೆ. ಆಯಾ ಗ್ರಾಮಕ್ಕೆ ಒಳಪಡುವ ತಂಡಗಳು ಬೊಳಕಾಟ್ ತಂಡ ರಚಿಸಿಕೊಂಡು ಸ್ಪರ್ಧಿಸಬಹುದಾಗಿದೆ. ಉಮ್ಮತ್ತಾಟ್ ತಂಡದಲ್ಲಿ ೮ ಜನ ನರ್ತಕಿಯರು, ಇಬ್ಬರು ಹಾಡುಗಾರರು, ಬೊಳಕಾಟ್ ತಂಡದಲ್ಲಿ ೧೦ ಜನರು ಪಾಲ್ಗೊಳ್ಳಲಿದ್ದಾರೆ. ಎಪ್ರಿಲ್ ೭ ರಂದು ಬೆ. ೧೦ ಗಂಟೆಗೆ ಪೊನ್ನಂಪೇಟೆ ಕೊಡವ ಸಮಾಜ ಅಧ್ಯಕ್ಷ ಕಾಳಿಮಾಡ ಎಂ. ಮೋಟಯ್ಯ ಉದ್ಘಾಟಿಸಲಿದ್ದಾರೆ. ವೇದಿಕೆ ಸ್ಥಾಪಕ ಅಧ್ಯಕ್ಷ ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಹಿರಿಯರಾದ ಚೆಕ್ಕೆರ ಸನ್ನಿ ಸುಬ್ಬಯ್ಯ, ಅಧ್ಯಕ್ಷ ಕೊಟ್ಟ್ಕತ್ತಿರ ಪಿ. ಸೋಮಣ್ಣ, ಉಪಾಧ್ಯಕ್ಷ ಮಂಡೇಚAಡ ಪಿ. ಗಣಪತಿ, ಕಾರ್ಯದರ್ಶಿ ಚೇಂದಿರ ಎಂ. ಬೋಪಣ್ಣ, ಖಜಾಂಚಿ ಐನಂಡ ಕೆ. ಮಂದಣ್ಣ, ಜಂಟಿ ಕಾರ್ಯದರ್ಶಿ ದೇಯಂಡ ಎಂ ಕಾವೇರಮ್ಮ, ಆಂತರಿಕ ಲೆಕ್ಕ ಪರಿಶೋಧಕ ದಾದು ಪೂವಯ್ಯ, ನಿನಾದ ವಿದ್ಯಾ ಸಂಸ್ಥೆ ಅಧ್ಯಕ್ಷೆ ಚೇಂದಿರ ನಿರ್ಮಲಾ ಬೋಪಣ್ಣ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೋಮೇಂಗಡ ಗಣೇಶ್ ತಿಮ್ಮಯ್ಯ, ಎರಡು ಡಾಕ್ಟರೇಟ್ ಪಡೆದ ಡಾ. ತೀತರಮಾಡ ರೂಪ ರಾಜ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಿಯಮಿತದಲ್ಲಿ ಚಾಲಕ ಸೇವೆಯಲ್ಲಿ ಪಧಕ ಪಡೆದಿರುವ ಮಲ್ಲಂಗಡ ರಾಜಾ ಸುಬ್ಬಯ್ಯ ಅವರನ್ನು ಸನ್ಮಾನಿಸಲಾಗುವುದು. ಸ್ಥಳೀಯ ಕಲಾವಿದರ ಸಾಂಸ್ಕೃತಿಕ ಕಾರ್ಯಕ್ರಮ, ಎ. ೮ ರಂದು ಮಾರಾಟ ಮೇಳ ನಡೆಸಲಾಗುವುದು ಎಂದು ತಿಳಿಸಿದರು.

ವೇದಿಕೆ ಸ್ಥಾಪಕ ಅಧ್ಯಕ್ಷ ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಕಾರ್ಯದರ್ಶಿ ಚೇಂದಿರ ಎಂ. ಬೋಪಣ್ಣ, ನಿರ್ದೇಶಕ ಕೊಳ್ಳಿಮಾಡ ಎನ್. ಕಾರ್ಯಪ್ಪ, ಮದ್ರೀರ ಕರುಂಬಯ್ಯ ಇದ್ದರು.