ಮಡಿಕೇರಿ, ಏ. ೨: ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಪೊಲೀಸರ ಪಾತ್ರ ಬಹುಮುಖ್ಯ ವಾದದ್ದು ಎಂದು ನಿವೃತ್ತ ವೃತ್ತ ನಿರೀಕ್ಷಕ ಸಿ.ಎನ್. ದಿವಾಕರ್ ಹೇಳಿದರು.
ಕೊಡಗು ಜಿಲ್ಲಾ ಪೊಲೀಸ್ ವತಿಯಿಂದ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಆಯೋಜಿಸಲಾಗಿದ್ದ ಪೊಲೀಸ್ ಧ್ವಜ ದಿನಾಚರಣೆ ಹಾಗೂ ಫೀ.ಮಾ. ಕಾರ್ಯಪ್ಪ ಟ್ರೋಫಿ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಪೊಲೀಸರು ಕರ್ತವ್ಯ ನಿರ್ವಹಿಸುವ ಸಂದರ್ಭ ಹಲವಾರು ಸಂಕಷ್ಟಗಳು ಎದುರಾಗು ತ್ತವೆ. ಅವುಗಳನ್ನೆಲ್ಲಾ ಎದುರಿಸಿ ಸಮಾಜದ ಸ್ವಾಸ್ಥö್ಯಕ್ಕಾಗಿ ಪೊಲೀಸರು ಶ್ರಮಿಸುತ್ತಾರೆ ಎಂದು ಅವರು ಹೇಳಿದರು.
ಅತಿಥಿಯಾಗಿ ನಿವೃತ್ತ ಏರ್ ಮಾರ್ಷಲ್ ಕೆ.ಸಿ. ಕಾರ್ಯಪ್ಪ ಪಾಲ್ಗೊಂಡು ಪೊಲೀಸರ ಕರ್ತವ್ಯ ನಿರ್ವಹಣೆ ಬಗ್ಗೆ ಮಾತನಾಡಿದರು.
ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮಾತನಾಡಿ, ಪೊಲೀಸ್ ಧ್ವಜ ದಿನಾಚರಣೆ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯ ಸೇವೆಯನ್ನು ಸ್ಮರಿಸುವ ದಿನವಾಗಿದೆ. ದೇಶದ ಗಡಿಯಲ್ಲಿ ಸೈನಿಕರು ದೇಶ ರಕ್ಷಣೆಗಾಗಿ ದುಡಿಯುತ್ತಾರೆ; ದೇಶದ ಒಳಗೆ ಪೊಲೀಸರು ಶಾಂತಿ ಸುವ್ಯವಸ್ಥೆ ಕಾಪಾಡಲು ಶ್ರಮಿಸುತ್ತಾರೆ ಎಂದು ನುಡಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್ ಉಪಸ್ಥಿತರಿದ್ದರು.
ಕಾರ್ಯಪ್ಪ ಟ್ರೋಫಿ ವಿತರಣೆ
ಪೊಲೀಸ್ ಇಲಾಖೆಯಲ್ಲಿ ಶ್ಲಾಘನೀಯ ಸೇವೆಗಾಗಿ ನೀಡಲಾಗುವ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಟ್ರೋಫಿಯನ್ನು ಈ ಬಾರಿ ಕುಶಾಲನಗರ ಗ್ರಾಮಾಂತರ ಠಾಣೆಯ ಸಿಪಿಸಿ ವಿ. ಪ್ರಕಾಶ್ ಪಡೆದುಕೊಂಡರು. ಇತ್ತೀಚೆಗೆ ಕುಶಾಲನಗರದ ಅಮನ್ವನಾ ರೆಸಾರ್ಟ್ನಲ್ಲಿ ನಡೆದಿದ್ದ ಕಳವು ಪ್ರಕರಣವನ್ನು ಬೇಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಿನ್ನೆಲೆಯಲ್ಲಿ ಪ್ರಕಾಶ್ ಅವರು ಕಾರ್ಯಪ್ಪ ಟ್ರೋಫಿಗೆ ಭಾಜನರಾದರು.ಅತ್ಯುತ್ತಮ ಪೊಲೀಸ್ ಪ್ರಶಸ್ತಿಯನ್ನು ಡಿಎಸ್ಬಿ ಘಟಕದ ಸವಿತಾ ಪಡೆದುಕೊಂಡರು. ಟಿಪ್ಪು ಜಯಂತಿ ಸೇರಿದಂತೆ ಹಲವಾರು ಪ್ರಕರಣಗಳ ಸಂದರ್ಭ ಸಲ್ಲಿಸಿದ ಪ್ರಾಮಾಣಿಕ ಸೇವೆಗೆ ಪ್ರಶಸ್ತಿ ನೀಡಲಾಯಿತು.