ಕೂಡಿಗೆ, ಏ. ೨: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲುಸೆ ಗ್ರಾಮದ ಶ್ರೀ ವೀರಶೈವ ಸಮಾಜ ಮತ್ತು ಬಸವೇಶ್ವರ ಸಮಿತಿ ಹಾಗೂ ಗ್ರಾಮಸ್ಥರ ಆಶ್ರಯದಲ್ಲಿ ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಶಿವಯೋಗಿ ಸ್ವಾಮೀಜಿಯ ೧೧೬ನೇ ಜಯಂತಿ ಗುರುವಂದನಾ ಸ್ಮರಣೆ ಕಾರ್ಯಕ್ರಮವು ನಡೆಯಿತು.
ವಿಶೇಷವಾದ ಪೂಜೆಯೊಂದಿಗೆ ಹುಲುಸೆ ಗ್ರಾಮದ ಶ್ರೀ ಬಸವೇಶ್ವರ ದೇವಾಲಯದ ಆವರಣದಲ್ಲಿ ನಡೆದ ಕಾರ್ಯಕ್ರಮದ ಅಂಗವಾಗಿ ಗ್ರಾಮಸ್ಥರು, ಸಮಿತಿಯವರು ಸಮೀಪದ ಕಾವೇರಿ ನದಿಗೆ ತೆರಳಿ ನದಿಯಲ್ಲಿ ಗಂಗಾಪೂಜೆ, ಕಲಶ ಪೂಜೆ ಮಾಡಿ ನೂರಾರು ಮಂದಿ ಕಾವೇರಿ ನದಿಯಿಂದ ಮಂಗಳಾ ವಾದ್ಯ ಗಳೊಂದಿಗೆ ಪೂರ್ಣಕುಂಭವಾಗಿ ನದಿಯಿಂದ ಗ್ರಾಮದ ಬಸವೇಶ್ವರ ದೇವಾಲಯದವರೆಗೆ ಮೆರವಣಿಗೆ ಸಾಗಿ ಮೊದಲು ಶ್ರೀ ಬಸವೇಶ್ವರ ದೇವರಿಗೆ ಪೂಜೆ ಸಲ್ಲಿಸಿದರು.
ನಂತರ ವಿದ್ಯುತ್ ಅಲಂಕಾರ ಮತ್ತು ಹೂವಿನಿಂದ ಸಿಂಗಾರ ಗೊಂಡಿದ್ದ ವಾಹನದಲ್ಲಿ ಸ್ವಾಮೀಜಿಯ ಭಾವಚಿತ್ರ ಅಳವಡಿಸಿ ಮಂಗಳವಾದ್ಯ ಸಮೇತವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು
ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ಸಾಗಿದ ನಂತರ ಬಸವೇಶ್ವರ ದೇವಸ್ಥಾನ ಹತ್ತಿರ ಸಮಾಪ್ತಿಗೊಂಡಿತು. ಆಗಮಿಸಿದ ಸಾವಿರಾರು ಭಕ್ತರಿಗೆ ಅನ್ನ ದಾಸೋಹ ಕಾರ್ಯಕ್ರಮವು ನಡೆಯಿತು.
ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯ ಹೆಚ್.ಎನ್. ಶಿವನಂಜಪ್ಪ, ಗ್ರಾಮದ ಪ್ರಮುಖರಾದ ಹೆಚ್.ಎಸ್. ಮಲ್ಲಿಕಾರ್ಜುನ, ಬಸವರಾಜ್, ಶಿವರುದ್ರಪ್ಪ, ಶಿವನಂಜಪ್ಪ, ಪುಟ್ಟಸ್ವಾಮಿ, ರಾಜೇಂದ್ರ, ಧನಂಜಯ, ಸೇರಿದಂತೆ ಸಮಿತಿಯ ಪ್ರಮುಖರು ನೂರಾರು ಗ್ರಾಮಸ್ಥರು ಭಾಗವಹಿಸಿದ್ದರು.