ಪೆರಾಜೆ, ಏ. ೨: ಸುಳ್ಯ ಮತ್ತು ಮಡಿಕೇರಿ ಗಡಿಭಾಗದ ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ನಡೆಯುವ ವಿಶಿಷ್ಠ ಶ್ರೀ ಭಗವತಿ ದೊಡ್ಡ ಮುಡಿ. ಮುಗಿಲೆತ್ತರದ ಈ ಮುಡಿಗೆ ವಿಶೇಷ ಆಕರ್ಷಣೆ ಇದೆ. ತುಳುನಾಡಿನ ಭೂತಾರಾಧನೆ ಮತ್ತು ಕೇರಳದ ತೆಯ್ಯಂನ ಮಿಳಿತದೊಂದಿಗೆ ನಡೆಯುವ ಪೆರಾಜೆ ದೊಡ್ಡಮುಡಿ ಪ್ರತಿ ವರ್ಷದಂತೆ ಪೆರಾಜೆ ಗ್ರಾಮದ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಶನಿವಾರ ವಿಜ್ರಂಭಣೆಯಿAದ ನಡೆಯಿತು.

ರಾಜ್ಯದಲ್ಲೇ ಅಪರೂಪದ ದೇವಿಯ ಆರಾಧನೆಯ ಮೂಲಕ ಪೂಜಿಸುವ ಪೆರಾಜೆ ಭಗವತಿ ದೊಡ್ಡಮುಡಿಯಲ್ಲಿ ಕೇರಳ ಮತ್ತು ಕರ್ನಾಟಕದ ನಾನಾ ಭಾಗಗಳಿಂದ ಬಂದ ಸಾವಿರಾರು ಭಕ್ತರು ಭಾವಪರವಶರಾದರು. ಈ ಸಂದರ್ಭದಲ್ಲಿ ಭಗವತಿ ದೇವಿಗೆ ಕಂಕಣ ಭಾಗ್ಯ, ಸಂತಾನ ಭಾಗ್ಯ ಹಾಗೂ ಇತರ ಕಾರ್ಯಗಳಿಗೆ ಹರಕೆ ಹೊತ್ತ ಭಕ್ತರು ತಮ್ಮ ಹರಕೆಯ ರೂಪದಲ್ಲಿ ಸಾವಿರಾರು ಭಕ್ತರು ಸೀರೆ, ಚಿನ್ನ, ಬೆಳ್ಳಿಗಳನ್ನು ಅರ್ಪಿಸಿದರು.

ಈ ಸಂದರ್ಭದಲ್ಲಿ ದೇವಳದ ಪ್ರಧಾನ ಅರ್ಚಕ ವೆಂಕಟ್ರಮಣ ಪಾಙ್ಞಣ್ಣಾಯ, ದೇವಳದ ಆಡಳಿತ ಮೊಕ್ತೇಸರ ಜಿತೇಂದ್ರ ನಿಡ್ಯಮಲೆ, ದೇವತಕ್ಕ ರಾಜಗೋಪಾಲ ರಾಮಕಜೆ, ಆಡಳಿತ ಕಾರ್ಯದರ್ಶಿ ತೇಜಕುಮಾರ್ ಅಮೆಚೂರು, ಮಾಜಿ ಮೊಕ್ತೇಸರರು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಮುಖ್ಯಸ್ಥರು ಉಪಸ್ಥಿತರಿದ್ದರು. ಹೈಕೋರ್ಟ್ ವಕೀಲ ಪೊನ್ನಣ್ಣ ನಾನಾ ಮುಖಂಡರು ಭಾಗವಹಿಸಿದರು.