ಮಡಿಕೇರಿ, ಮಾ. ೩೧: ವೀರ ಸೇನಾನಿ, ಪದ್ಮಭೂಷಣ ಜನರಲ್ ಕೆ.ಎಸ್. ತಿಮ್ಮಯ್ಯ ಅವರ ೧೧೭ನೇ ಹುಟ್ಟು ಹಬ್ಬವನ್ನು ಜಿಲ್ಲಾಡಳಿತ ವತಿಯಿಂದ ಆಚರಿಸಲಾಯಿತು.
ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನದಲ್ಲಿ ನಡೆದ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಫೋರಂನ ಸಂಚಾಲಕ ಮೇಜರ್ (ನಿವೃತ್ತ) ಬಿದ್ದಂಡ ನಂಜಪ್ಪ, ಮಡಿಕೇರಿ ತಾಲೂಕು ಜಾನಪದ ಪರಿಷತ್ತು ಅಧ್ಯಕ್ಷ ಅನಿಲ್ ಎಚ್.ಟಿ., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ, ಗೌಡಂಡ ಸುಬೇದಾರ್ ತಿಮ್ಮಯ್ಯ, ಇತರರು ಜನರಲ್ ಕೆ.ಎಸ್. ತಿಮ್ಮಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಗೌರವ ನಮನ ಸಲ್ಲಿಸಿದರು.
ಬಳಿಕ ಮಾತನಾಡಿದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಫೋರಂನ ಸಂಚಾಲಕ ಬಿದ್ದಂಡ ನಂಜಪ್ಪ ಅವರು, ಅಮರ ಸೇನಾನಿ ಜನರಲ್ ತಿಮ್ಮಯ್ಯ ಅವರು ಹುಟ್ಟಿದ ಮನೆ ಸನ್ನಿಸೈಡ್ ‘ದೇವರ ಮನೆ’ ಇದ್ದಂತೆ.
ಜನರಲ್ ತಿಮ್ಮಯ್ಯ ಅವರು ಭಾರತೀಯ ಸೇನೆಯಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಭಾರತೀಯ ಸೇನೆಯನ್ನು ಬಲಿಷ್ಠಗೊಳಿಸುವಲ್ಲಿ ಶ್ರಮಿಸಿದ್ದರು.
ಗೌರವಾರಾರ್ಥ ಸೈಪ್ರಸ್ ದೇಶವು ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದೆ. ಹಾಗೆಯೇ ಇತ್ತೀಚೆಗೆ ಕೊಲ್ಕತ್ತದಲ್ಲೂ ಸಹ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿರುವುದು ವಿಶೇಷವಾಗಿದೆ ಎಂದು ಸ್ಮರಿಸಿದರು. ಜನರಲ್ ತಿಮ್ಮಯ್ಯ
(ಮೊದಲ ಪುಟದಿಂದ) ಸ್ಮಾರಕ ಭವನವನ್ನು ‘ಜೈsssಸಲ್ಮೇರ್ನ ರಕ್ಷಣಾ ಸಂಗ್ರಹಾಲಯ’ ಮಾದರಿಯಲ್ಲಿ ಅಭಿವೃದ್ಧಿ ಪಡಿಸಬೇಕಿದೆ.
ಜನರಲ್ ತಿಮ್ಮಯ್ಯ ಅವರಂತಹ ಸೇನಾನಿ ಕಾಣುವುದು ಅಪರೂಪ. ಜನರಲ್ ತಿಮ್ಮಯ್ಯ ಅವರ ಬದುಕೇ ಒಂದು ರೀತಿ ಸೇನೆಯಾಗಿತ್ತು.
ಮಡಿಕೇರಿಯಲ್ಲಿನ ಮನೆ ತಿಮ್ಮಯ್ಯ ಅವರ ಇತಿಹಾಸ ಮಾತ್ರವಲ್ಲ, ಭಾರತೀಯ ಸೇನೆಯ ಇತಿಹಾಸವನ್ನು ತಿಮ್ಮಯ್ಯ ಮೂಲಕ ತೆರೆದಿಡುವ ಮನೆಯಾಗಿದೆ. ಸನ್ನಿಸೈಡ್ನ ಪ್ರತೀ ಕೋಣೆಯೂ ಸೈನಿಕನ ಕಥೆ ಹೇಳುವಂತಿದೆ ಎಂದರು.
ವಿದ್ಯಾರ್ಥಿನಿ ಶ್ರೀಶಾ ಮಾತನಾಡಿ, ಸ್ವಾತಂತ್ರö್ಯ ಭಾರತದ ಸೇನಾ ದಂಡನಾಯಕರಾಗಿ ಸೈನಿಕರ ನೆಚ್ಚಿನ ಸೇನಾನಿಯಾಗಿದ್ದರು. ಸೈನಿಕರ ನಾಡು ಎಂಬ ಕೀರ್ತಿ ಹೊಂದಿರುವ ಕೊಡಗಿನ ನೆಲದಲ್ಲಿ ತಿಮ್ಮಯ್ಯ ಮ್ಯೂಸಿಯಂ ರೂಪುಗೊಂಡಿರುವುದು ಭಾರತಕ್ಕೆ ಹೆಮ್ಮೆ. ಮ್ಯೂಸಿಯಂನಲ್ಲಿ ತಿಮ್ಮಯ್ಯ ಸೇನಾ ಜೀವನ ನೋಡಿ, ಭಾರತೀಯ ಸೇನೆಯ ಬಗ್ಗೆ ಹೆಮ್ಮೆಯ ಭಾವನೆಯೊಂದಿಗೆ ಹೊರಬರುತ್ತಿರುವಂತೆಯೇ, ಪ್ರತಿಯೊಬ್ಬ ಸಂದರ್ಶಕನ ಮನದಲ್ಲಿ ವ್ಯಕ್ತಗೊಳ್ಳುವ ಭಾವನೆ ಒಂದೇ. ಭಾರತದ ಹೆಮ್ಮೆಯ ಧೀರ ಸೇನಾಧಿಕಾರಿ ಜನರಲ್ ತಿಮ್ಮಯ್ಯ ಅವರಿಗೆ ಗೌರವದ ಸೆಲ್ಯೂಟ್ ಎಂದು ಶ್ರೀಶಾ ಹೇಳಿದರು.
ಪೊಲೀಸ್ ವೃತ್ತ ನಿರೀಕ್ಷಕ ಶಿವಶಂಕರ, ಪೊಲೀಸ್ ಉಪ ನಿರೀಕ್ಷಕ ಶ್ರೀನಿವಾಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಣಜೂರು ಮಂಜುನಾಥ್ ಇತರರು ಇದ್ದರು.
ಸೇನಾ ಸ್ಮರಣಿಕೆ ಹಸ್ತಾಂತರ: ಭಾರತೀಯ ಸೇನಾ ದಕ್ಷಿಣ ವಲಯದ ಮುಖ್ಯಸ್ಥರಾದ ಲೆಪ್ಟಿನೆಂಟ್ ಜನರಲ್ ಎ.ಕೆ. ಸಿಂಗ್ ಅವರು ಇತ್ತೀಚೆಗೆ ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗೌರವ ಪೂರ್ವಕವಾಗಿ ನೀಡಲಾಗಿದ್ದ ‘ಸೇನಾ ಸ್ಮರಣಿಕೆ’ಯನ್ನು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಫೋರಂ ಸಂಚಾಲಕ ಮೇಜರ್ (ನಿವೃತ್ತ) ಬಿದ್ದಂಡ ನಂಜಪ್ಪ ಅವರು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರಿಗೆ ಹಸ್ತಾಂತರಿಸಿದರು.
ಗೋಣಿಕೊಪ್ಪದಲ್ಲಿ ಜ. ತಿಮ್ಮಯ್ಯ ಜಯಂತಿ ಆಚರಣೆ
*ಗೋಣಿಕೊಪ್ಪಲು, ಮಾ. ೩೧: ಕಾವೇರಿ ಪದವಿ ಮತ್ತು ಕಾವೇರಿ ಪದವಿಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಜನರಲ್ ಕೊಡಂದೇರ ಸುಬ್ಬಯ್ಯ ತಿಮ್ಮಯ್ಯ ಅವರ ೧೧೭ನೇ ಜನ್ಮದಿನವನ್ನು ಅವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಉಪಪ್ರಾಂಶುಪಾಲೆ ಡಾ. ಎ.ಎಸ್. ಪೂವಮ್ಮ ತಮ್ಮಯ್ಯ ಅವರು ದೇಶದ ರಕ್ಷಣಾ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಅಪ್ರತಿಮ ವೀರ ಸೇನಾನಿ. ಅಂದಿನ ದಿನಗಳಲ್ಲಿ ಕಾಶ್ಮೀರ ಸಮಸ್ಯೆಯನ್ನು ಇತ್ಯರ್ಥಪಡಿಸಲು ಶ್ರಮಿಸಿದರು. ಭಾರತ, ಪಾಕಿಸ್ತಾನ ಸಂದಿಗ್ಧ ಸಂದರ್ಭದಲ್ಲಿ ಸೇನಾ ಕ್ಷೇತ್ರದಲ್ಲಿ ಚತುರತೆಯಿಂದ ಕಾರ್ಯ ನಿರ್ವಹಿಸಿದರು. ಎರಡನೇ ಮಹಾಯುದ್ಧದಲ್ಲಿ ಪಾಲ್ಗೊಂಡ ಇವರು ೧೯೫೭ರಲ್ಲಿ ಭಾರತೀಯ ಸೇನೆಯ ಆರನೇ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. ಸತತ ೩೫ ವರ್ಷಗಳ ಕಾಲ ಭಾರತೀಯ ಸೇನಾ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದರು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಪ್ರಾಂಶುಪಾಲ ಎಂ.ಬಿ. ಕಾವೇರಪ್ಪ, ಪ್ರೊ. ಎಸ್.ಎಸ್. ಮಾದಯ್ಯ, ಪ್ರಾಧ್ಯಾಪಕ ಪ್ರೊ. ಭಾರತಿ, ಕ್ಯಾಪ್ಟನ್ ಬ್ರೈಟಾಕುಮಾರ್, ಲೆಫ್ಟಿನೆಂಟ್ ಅಕ್ರಂ, ಲೆಫ್ಟಿನೆಂಟ್ ಲೇಪಾಕ್ಷಿ, ಉಪನ್ಯಾಸಕ ಪದ್ಮಾ, ಸುಜಯ್, ಶಬ್ನಾ ಸೋಮಯ್ಯ ಮತ್ತು ಎನ್.ಸಿ.ಸಿ. ಕೆಡೆಟ್ಗಳು ಇದ್ದರು.