ಕೂಡಿಗೆ, ಏ. ೧: ಹಾರಂಗಿ ಅಚ್ಚುಕಟ್ಟು ಪ್ರದೇಶ ಮತ್ತು ಮಳೆ ಆಧಾರಿತವಾಗಿ ಬೆಳೆದ ಭತ್ತದ ಬೆಳೆಯ ಒಣ ಹುಲ್ಲಿನ ಬೆಲೆ ದಿನ ಕಳೆದಂತೆ ಅಧಿಕವಾಗುತ್ತಿದೆ. ಕುಶಾಲನಗರ ತಾಲೂಕು ವ್ಯಾಪ್ತಿಯ ಹಾರಂಗಿ ಅಚ್ಚುಕಟ್ಟು ಪ್ರದೇಶಗಳಾದ ಹಾರಂಗಿಯಿAದ ಕೊಡಗಿನ ಗಡಿಭಾಗ ಶಿರಂಗಾಲ ಮತ್ತು ಅದರ ಅಚ್ಚುಕಟ್ಟು ಪ್ರದೇಶಗಳಲ್ಲಿ ಹೆಚ್ಚುವರಿಯಾಗಿ ಭತ್ತದ ಬೆಳೆಯನ್ನು ಬೆಳೆದರೂ ಸಹ ರೈತರು ಆಧುನಿಕ ಭತ್ತದ ಬೆಳೆ ಕಟಾವಿನ ಯಂತ್ರದ ಮೂಲಕ ಭತ್ತ ಬೆಳೆಯನ್ನು ಕಟಾವು ಮಾಡಿಸುವುದರಿಂದಾಗಿ ಭತ್ತದ ಸಂಗ್ರಹವಾಗುವುದು. ಆದರೆ ಅದರ ಒಣಹುಲ್ಲು ಮಾತ್ರ ಪುಡಿ ಪುಡಿಯಾಗುವುದರಿಂದಾಗಿ ಈ ಬಾರಿ ಒಣಹುಲ್ಲಿಗೆ ಭಾರೀ ಬೇಡಿಕೆಯಾಗುತ್ತಿದೆ.
ಕುಶಾಲನಗರ ತಾಲೂಕಿನ ಮದಲಾಪುರ, ಹುದುಗೂರು, ಕೂಡಿಗೆ, ಶಿರಂಗಾಲ, ಹೆಬ್ಬಾಲೆ, ತೊರೆನೂರು ಸೇರಿದಂತೆ ಅನೇಕ ಉಪ ಗ್ರಾಮಗಳಲ್ಲಿ ಹೆಚ್ಚು ರೈತರು ಹೈನುಗಾರಿಕೆಯಲ್ಲಿ ತೊಡಗಿರುತ್ತಾರೆ. ಅಲ್ಲದೆ ಲಕ್ಷಗಟ್ಟಲೆ ಹಣವನ್ನು ನೀಡಿ ಉತ್ತಮವಾದ ಹೈಬ್ರೀಡ್ ತಳಿಯ ಹಸುಗಳನ್ನು ಸಹ ಸಾಕುತ್ತಿದ್ದಾರೆ. ಈ ಹಸುಗಳಿಗೆ ಪಶು ಆಹಾರದಷ್ಟೇ ಹುಲ್ಲಿನ ಮೇವು ಸಹ ಉತ್ಕೃಷ್ಟವಾದ, ಪೋಷಕಾಂಶಗಳ ಆಹಾರವಾಗಿರುತ್ತದೆ. ಜೊತೆಗೆ ಮಳೆಗಾಲದಲ್ಲಿ ಅಧಿಕ ಮಳೆ ಬೀಳುವ ಸಂದರ್ಭದಲ್ಲಿ ಹಸಿರು ಹುಲ್ಲಿನ ಕಟಾವಿಗೆ ತೊಂದರೆಗಳು ಆದಾಗ ಪ್ರಮುಖವಾಗಿ ಒಣಹುಲ್ಲಿನ ಆಹಾರ ಹಸುಗಳಿಗೆ ಮುಖ್ಯವಾಗಿರುತ್ತದೆ. ಇದರಿಂದಾಗಿ ಹಸುಗಳ ಕಾವಿನ ತಾಪಮಾನ ಹೆಚ್ಚುವುದು ಮತ್ತು ಆರೋಗ್ಯಕರವಾಗಿ ಹಸುಗಳು ಹೆಚ್ಚು ಹಾಲನ್ನು ಸಹ ನೀಡುತ್ತವೆ ಎಂದು ಹೈನುಗಾರಿಕೆಯಲ್ಲಿ ತೊಡಗಿರುವ ರೈತರು ಹೇಳುತ್ತಾರೆ.
ಒಣಹುಲ್ಲು ಕಡಿಮೆ ಇರುವುದರಿಂದ ಪಕ್ಕದ ಜಿಲ್ಲೆಯ ರೈತರಿಂದ ಹುಲ್ಲನ್ನು ಖರೀದಿಸಲಾಗುತ್ತಿದೆ. ಕೊಡಗಿನ ಕೆಲವು ಭಾಗಗಳಲ್ಲಿ ಹೆಚ್ಚು ಒಣಹುಲ್ಲು ಇರುತ್ತಿತ್ತು. ಜೊತೆಗೆ ಜಿಲ್ಲೆಯಿಂದ ಹುಲ್ಲು ಕೇರಳ ರಾಜ್ಯ, ಗಡಿಭಾಗದ ಜಿಲ್ಲೆಗಳಿಗೆ ಸಾಗಾಟವಾಗುತ್ತಿತ್ತು. ಆದರೆ ಈ ಸಾಲಿನಲ್ಲಿ ಕೊಡಗಿನಲ್ಲಿ ಕೃಷಿಯಲ್ಲಿ ನೂತನ ಕೃಷಿ ಯಂತ್ರಗಳ ಬಳಕೆಯಿಂದಾಗಿ ಭತ್ತದ ಗದ್ದೆಗಳಲ್ಲಿ ಬೆಳೆ ಕಟಾವು ಮಾಡಿದ ಪರಿಣಾಮವಾಗಿ ಹುಲ್ಲು ಮಾತ್ರ ಸಣ್ಣ ಪ್ರಮಾಣದಲ್ಲಿ ಪುಡಿಯಾಗಿ ಎಕರೆಗೆ ೩೦೦ ಕಟ್ಟು ಸಿಗುವ ಒಣ ಭತ್ತದ ಹುಲ್ಲು ಈ ಬಾರಿ ೫೦ ಕಟ್ಟುಗಳು ಸಹ ಸಿಗುತ್ತಿಲ್ಲ.
ಒಂದು ಕಟ್ಟು ಹುಲ್ಲಿನ ಬೆಲೆ ಅಂದರೆ ೪. ಕೆ.ಜಿ.ಗಳಷ್ಟು ತೂಕಕ್ಕೆ ರೂ. ೪೦ ರಷ್ಟು ಬೆಲೆ ಈ ದಿನಗಳಲ್ಲಿ ನಡೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಈ ಹುಲ್ಲನ್ನು ಕೆಲವು ರೈತರು ಶುಂಠಿ ಬೆಳೆಯನ್ನು ಬಿತ್ತನೆ ಮಾಡುವ ಸಂದರ್ಭ ಅದರ ಮುಚ್ಚುವಿಕೆಗೆ ಬಳಸುತ್ತಾರೆ. ಇದರಿಂದಾಗಿ ಮಳೆಗಾಲದ ಸಂದರ್ಭ ಹೈನುಗಾರಿಕೆಗೆ ಅನುಕೂಲವಾಗುವ ದೃಷ್ಟಿಯಿಂದ ಒಣಹುಲ್ಲಿನ ಸಂಗ್ರಹಕ್ಕೆ ಈ ವ್ಯಾಪ್ತಿಯ ರೈತರು ಮುಂದಾಗಿದ್ದಾರೆ. - ಕೆ.ಕೆ. ನಾಗರಾಜಶೆಟ್ಟಿ.