ಸೋಮವಾರಪೇಟೆ, ಮಾ. ೨೯: ವಿದ್ಯಾರ್ಥಿಗಳು ಆರೋಗ್ಯದ ಬಗ್ಗೆ ಕಾಳಜಿ ವಹಿಸಿದರೆ ಮಾತ್ರ ಶಿಕ್ಷಣವನ್ನು ಅಚ್ಚುಕಟ್ಟಾಗಿ ಕಲಿಯಲು ಸಾಧ್ಯ. ಆರೋಗ್ಯವಂತ ಯುವ ಜನಾಂಗವೇ ದೇಶದ ಸಂಪತ್ತು ಎಂದು ಶಾಸಕ ಅಪ್ಪಚ್ಚು ರಂಜನ್ ಹೇಳಿದರು. ತಾ. ೨೭ ರಂದು ಸಮೀಪದ ಬಿ.ಟಿ.ಸಿ.ಜಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣ, ಹೆಚ್ಚುವರಿ ತರಗತಿ ಕಟ್ಟಡ ಮತ್ತು ಕಂಪ್ಯೂಟರ್ ಲ್ಯಾಬ್ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ದೈಹಿಕವಾಗಿ ಸದೃಢರಾದರೆ ಎಲ್ಲ ಕೆಲಸಗಳನ್ನು ಆಸಕ್ತಿಯಿಂದ ಮಾಡಬಹುದು. ಇಲ್ಲವಾದರೆ ಕೀಳರಿಮೆ ಉಂಟಾಗಲಿದೆ. ವೈಯಕ್ತಿಕ ಅಭಿವೃದ್ಧಿಯತ್ತ ಹೆಚ್ಚಿನ ಆಸಕ್ತಿ ವಹಿಸಿಕೊಳ್ಳಬೇಕಾಗಿದೆ. ಆಗ ಮಾತ್ರ ಕಷ್ಟ ಬಂದಾಗ ಎದುರಿಸಲು ಸಾಧ್ಯ. ಹಾಗಾಗಿಯೇ ನಗರ ಪ್ರದೇಶದ ವಿದ್ಯಾರ್ಥಿಗಳಿಗಿಂತ ಗ್ರಾಮೀಣ ಪ್ರದೇಶದ ಮಕ್ಕಳು ಹೆಚ್ಚು ಪ್ರಬಲರಾಗಿರುತ್ತಾರೆ. ಇದು ದೊಡ್ಡಮಟ್ಟದ ಸಾಧನೆ ಮಾಡಲು ಸಾಧ್ಯವಾಗಲಿದೆ ಎಂದರು.

ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎಸ್. ಮಹೇಶ್ ಮಾತನಾಡಿ, ಕಾಲೇಜಿನ ಮಕ್ಕಳಿಗೆ ಕಂಪ್ಯೂಟರ್ ಜ್ಞಾನ ಕಲ್ಪಿಸುವ ನಿಟ್ಟಿನಲ್ಲಿ ನೂತನವಾಗಿ ಲ್ಯಾಬ್ ಅನ್ನು ಪ್ರಾರಂಭಿಸಲಾಗಿದೆ. ಕಾಲೇಜಿನ ಅಭಿವೃದ್ಧಿಗೆ ಉಪನ್ಯಾಸಕರೊಂದಿಗೆ ಪೋಷಕರೂ ಸಹ ಕೈಜೋಡಿಸಬೇಕಾಗಿದೆ ಎಂದರು.

ಕಾಲೇಜಿನ ಐಕ್ಯೂಎಸಿ ಸಂಚಾಲಕ ಎಂ.ಎಸ್. ಶಿವಮೂರ್ತಿ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಧನಲಕ್ಷಿö್ಮ ವಹಿಸಿದ್ದರು. ಹಾನಗಲ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷಿö್ಮ ಪಾಂಡಿಯನ್, ಉಪಾಧ್ಯಕ್ಷ ಮಿಥುನ್, ಪಿಡಿಓ ಅಸ್ಮಾ, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಸೋಮೇಶ್, ಗ್ರಾಮ ಪಂಚಾಯಿತಿ ಸದಸ್ಯರು, ಧರ್ಮಸ್ಥಳ ಸ್ವಸಹಾಯ ಸಂಘದ ಶೌರ್ಯ ತಂಡದ ಸದಸ್ಯರು, ಹಳೆಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರು, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.