ಮಡಿಕೇರಿ, ಮಾ. ೩೦: ವಿಧಾನಸಭಾ ಚುನಾವಣೆ ಹಿನ್ನೆಲೆ ಜಾರಿಯಾಗಿರುವ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಕಾಂಗ್ರೆಸ್ ಪಕ್ಷದ ಇಬ್ಬರಿಗೆ ಚುನಾವಣಾಧಿಕಾರಿ ಯತೀಶ್ ಉಲ್ಲಾಳ ನೋಟೀಸ್ ಜಾರಿ ಮಾಡಿ ೨೪ ಗಂಟೆಯೊಳಗೆ ಉತ್ತರಿಸಲು ಸೂಚಿಸಿದ್ದಾರೆ.

ಮಡಿಕೇರಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಡಾ. ಮಂಥರ್‌ಗೌಡ ಹಾಗೂ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್ ಅವರಿಗೆ ನೋಟೀಸ್ ಜಾರಿ ಮಾಡಲಾಗಿದೆ. ರಾಜಕೀಯ ಪಕ್ಷದ ಚಿಹ್ನೆ ಬಳಸಿ ಯಾವುದೇ ರೀತಿ ಅನುಮತಿ ಪಡೆಯದೆ ಡಾ. ಮಂಥರ್‌ಗೌಡ ರಾಮನವಮಿ ಹಬ್ಬದ ಶುಭಾಶಯ ಕೋರಿರುವ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಹಿನ್ನೆಲೆ ಕಾರಣ ಕೇಳಿ ನೋಟೀಸ್ ನೀಡಲಾಗಿದೆ.

ವಾಟ್ಸ್ಪ್ ಗ್ರೂಪ್‌ನಲ್ಲಿ ಯಾವುದೇ ಪೂರ್ವನುಮತಿ ಪಡೆಯದೆ ರಾಜಕೀಯ ಪ್ರೇರಿತ ವೀಡಿಯೋ ತುಣುಕು ಹಂಚಿಕೊAಡಿರುವ ಹಿನ್ನೆಲೆ ವಿ.ಪಿ. ಶಶಿಧರ್‌ಗೆ ನೋಟೀಸ್ ನೀಡಲಾಗಿದ್ದು, ೨೪ ಗಂಟೆಯೊಳಗೆ ಕಾನೂನು ಕ್ರಮ ಏಕೆ ಜರುಗಿಸಬಾರದು ಎಂದು ಸೂಕ್ತ ಕಾರಣ ತಿಳಿಸುವಂತೆ ಇಬ್ಬರಿಗೆ ಸೂಚಿಸಿದ್ದಾರೆ. ಸಮಾಜಯಿಷಿಕೆ ನೀಡದಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ನೋಟೀಸ್‌ನಲ್ಲಿ ಉಲ್ಲೇಖಿಸಲಾಗಿದೆ.