ಕುಶಾಲನಗರ, ಮಾ.೨೯: ನಿರಂತರ ಚಟುವಟಿಕೆಗಳ ಮೂಲಕ ಜಾನಪದ ಕಲೆ, ಸಂಸ್ಕೃತಿ ಉಳಿಸಿ ಬೆಳೆಸಲು ಸಾಧ್ಯ ಎಂದು ಕುಶಾಲನಗರದ ಡಿವೈಎಸ್ಪಿ ಗಂಗಾಧರಪ್ಪ ಅವರ ಪತ್ನಿ ಪ್ರಿಯಾಂಕ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಕುಶಾಲನಗರದ ಕಣಿವೆ ಶ್ರೀ ರಾಮಲಿಂಗೇಶ್ವರ ರಥೋತ್ಸವ ಪ್ರಯುಕ್ತ ಕರ್ನಾಟಕ ಜಾನಪದ ಪರಿಷತ್ತು ಮತ್ತು ದೇವಾಲಯ ಸಮಿತಿ ಆಶ್ರಯದಲ್ಲಿ ಕಣಿವೆಯಲ್ಲಿ ನಡೆದ ಹಳ್ಳಿ ಹಬ್ಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕ್ರೀಡೆಯ ಮೂಲಕ ಪರಸ್ಪರ ಉತ್ತಮ ಬಾಂಧವ್ಯ ವೃದ್ಧಿಯಾಗಲು ಸಾಧ್ಯ ಎಂದು ಅವರು ಹೇಳಿದರು.

ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಜಾನಪದ ಪರಿಷತ್ ಜಿಲ್ಲಾ ಖಜಾಂಚಿ ಸಂಪತ್ ಕುಮಾರ್ ಸರಳಾಯ, ಕಲೆಗಳ ಬಗ್ಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನರಿಗೆ ಜಾನಪದ ಸಂಸ್ಕೃತಿ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಜನಪದೀಯ ಪ್ರತಿಭೆಗಳನ್ನು ಹುಡುಕಿ ಗೌರವಿಸುವ ಕೆಲಸ ಪರಿಷತ್ತು ಮೂಲಕ ನಡೆಯುತ್ತಿದೆ ಎಂದರು. ಕಣಿವೆ ಶ್ರೀ ರಾಮಲಿಂಗೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎನ್. ಸುರೇಶ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಭಾರದ್ವಾಜ ಕೆ. ಆನಂದತೀರ್ಥ, ಪರಿಷತ್ ಮಡಿಕೇರಿ ತಾಲೂಕು ಘಟಕದ ಅಧ್ಯಕ್ಷ ಎಚ್.ಟಿ. ಅನಿಲ್, ಕುಶಾಲನಗರ ತಾಲೂಕು ಘಟಕ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್, ಗೌರವಾಧ್ಯಕ್ಷರಾದ ಫ್ಯಾನ್ಸಿ ಮುತ್ತಣ್ಣ, ಕಾರ್ಯಕ್ರಮ ಸಂಯೋಜಕಿ ವನಿತಾ ಚಂದ್ರಮೋಹನ್, ಕಣಿವೆ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಕರುಂಬಯ್ಯ ಉಪಸ್ಥಿರಿದ್ದರು.

ಈ ಸಂದರ್ಭ ನಡೆದ ಹಳ್ಳಿ ಆಟಗಳಲ್ಲಿ ಗ್ರಾಮೀಣ ಕ್ರೀಡೆಗಳಾದ ಕುಂಟೆಬಿಲ್ಲೆ, ಗೋಣಿಚೀಲ ಕಟ್ಟಿ ಓಟ, ಕಣ್ಣಾ ಮುಚ್ಚಾಲೆ, ಎರಡು ಬಿಂದಿಗೆ ಹೊತ್ತು ಓಡುವ ಸ್ಪರ್ಧೆ, ತೆಂಗಿನಕಾಯಿ ಒಡೆಯುವುದು, ಬುಗರಿ ಆಟ, ಸೈಕಲ್ ಟೈರ್ ಆಟ, ಕೆರೆ- ದಡ ಆಟ, ಸೂಜಿಗೆ ದಾರ ಪೋಣಿಸುತ್ತ ಓಡುವುದು, ಮ್ಯೂಸಿಕಲ್ ಚೇರ್, ಮಡಿಕೆ ಒಡೆಯುವುದು, ಕಪ್ಪೆ ಓಟ ಮುಂತಾದ ಸ್ಪರ್ಧೆಗಳು ನಡೆದವು.

ಸ್ಥಳೀಯ ಸರಕಾರಿ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಸಾರ್ವಜನಿಕರು, ಪರಿಷತ್ ಸದಸ್ಯರು ಕ್ರೀಡಾ ಸಂಭ್ರಮದಲ್ಲಿ ಪಾಲ್ಗೊಂಡರು.

ಮುಖ್ಯೋಪಾಧ್ಯಾಯರಾದ ಕರುಂಬಯ್ಯ, ಕೊಡಗನ ಹರ್ಷ, ಬಿ ಎಸ್ ಪರಮೇಶ್, ಫ್ಯಾನ್ಸಿ ಮುತ್ತಣ್ಣ, ಗಜೇಂದ್ರ ಕಾರ್ಯಕ್ರಮ ಆಯೋಜಕರಾದ ವನಿತಾ ಚಂದ್ರಮೋಹನ್ ಬೆಳಗ್ಗಿನಿಂದ ಸಂಜೆ ತನಕ ಗ್ರಾಮೀಣ ಕ್ರೀಡಾಕೂಟದ ಸ್ಪರ್ಧೆಗಳನ್ನು ನಡೆಸಿಕೊಟ್ಟರು.

ತಾ. ೩೦ರಂದು (ಇಂದು) ಸಮಾರೋಪ ಸಮಾರಂಭ ಶ್ರೀ ರಾಮಲಿಂಗೇಶ್ವರ ದೇವಾಲಯ ಆವರಣದಲ್ಲಿ ಸಂಜೆ ೬:೩೦ಕ್ಕೆ ನಡೆಯಲಿದ್ದು ಜಾನಪದ ಸಂಭ್ರಮ ಹಾಗೂ ಬಹುಮಾನ ವಿತರಣೆ ಸಾಧಕರಿಗೆ ಸನ್ಮಾನ ನಡೆಯಲಿದೆ.

ಜಿಲ್ಲಾಧಿಕಾರಿ ಡಾ ಸತೀಶ, ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ.ಜಿ. ಅನಂತಶಯನ, ಜಯಶ್ರೀ ಅನಂತಶಯನ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎನ್. ಸುರೇಶ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಕ್ರೀಡಾಕೂಟದಲ್ಲಿ ವಿಜೇತರಾದ ಸ್ಪರ್ಧಾಳುಗಳಿಗೆ ಬಹುಮಾನ ವಿತರಣೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮ ಆಯೋಜಕಿ ವನಿತಾ ಚಂದ್ರಮೋಹನ್ ತಿಳಿಸಿದ್ದಾರೆ.