ಗೋಣಿಕೊಪ್ಪ ವರದಿ, ಮಾ. ೨೯: ಹಳ್ಳಿಗಟ್ಟು ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಡಾ. ಅಖಿಲ್ ಕುಟ್ಟಪ್ಪ, ಅಶ್ವತ್ ಐಯ್ಯಪ್ಪ ಜ್ಞಾಪಕಾರ್ಥ ಸ್ಥಾಪಿಸಿರುವ ‘ವೆಲ್ನೆಸ್ ಆ್ಯಂಡ್ ಫಿಟ್ನೆಸ್ ಸೆಂಟರ್’ ಅನ್ನು ದಾನಿ ಕೋಡಿಮಣಿಯಂಡ ರಘು ಮಾದಪ್ಪ ಮಂಗಳವಾರ ಉದ್ಘಾಟಿಸಿದರು. ನಂತರ ಮಾತನಾಡಿ, ನನಗೆ ಶಕ್ತಿಯ ಮೂಲವಾಗಿದ್ದ ಪುತ್ರರ ಹೆಸರಿನಲ್ಲಿ ಕ್ರೀಡೆಗೆ ಪ್ರೋತ್ಸಾಹಿ ಸುತ್ತಿರುವುದು ಹೆಮ್ಮೆ ಎನಿಸುತ್ತಿದೆ. ಕಳೆದುಕೊಂಡ ಪುತ್ರರನ್ನು ಮರಳಿ ಪಡೆಯಲಾಗದಿದ್ದರೂ ಪುತ್ರರ ನೆನಪಿನ ಮೂಲಕ ಕ್ರೀಡೆಗೆ ಉತ್ತೇಜನ ನೀಡಲಾಗುತ್ತಿದೆ ಎಂದರು.
ಕೊಡವ ಎಜುಕೇಷನ್ ಸೊಸೈಟಿ ಅಧ್ಯಕ್ಷ ಡಾ. ಎಂ.ಸಿ. ಕಾರ್ಯಪ್ಪ ಮಾತನಾಡಿ, ಪುತ್ರರ ಹೆಸರಿನಲ್ಲಿ ವಿದ್ಯಾರ್ಥಿಗಳ ದೈಹಿಕ ಆರೋಗ್ಯಕ್ಕೆ ಪ್ರೋತ್ಸಾಹ ನೀಡುತ್ತಿರುವ ದಾನಿ ಕೋಡಿಮಣಿಯಂಡ ರಘು ಮಾದಪ್ಪ ಅವರಿಂದ ಕಾಲೇಜಿಗೆ ಪ್ರಯೋಜನ ವಾಗಿದೆ. ಪ್ರತಿ ನಕರಾತ್ಮಕ ವಿಷಯಗಳು ಧನಾತ್ಮಕ ಬೆಳವಣಿಗೆ ಮೂಲಕ ಪರಿವರ್ತನೆ ಕಾಣುವುದನ್ನು ನಾವು ಕಾಣುತ್ತಿದ್ದೇವೆ. ಬದುಕಿನಲ್ಲಿ ಸಹಾಯ ಮನೋಭಾವ ನಮಗೆ ಶಕ್ತಿ ನೀಡುತ್ತದೆ ಎಂದರು.
ಶಕ್ತಿ ದಿನಪತ್ರಿಕೆ ಸಲಹಾ ಸಂಪಾದಕ ಅನಂತಶಯನ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಪ್ರತೀ ನಿಮಿಷ ಸವಾಲು ಎಂಬAತಾಗಿದೆ. ಸಾಧಿಸುವ ಛಲ ಮುಖ್ಯ. ಬದುಕಿನಲ್ಲಿ ಸಾಧನೆಯನ್ನು ಹೇಳಿಕೊಳ್ಳುವಂತಹ, ಗುರುತು ಬಿಟ್ಟು ಹೋಗುವುದರಿಂದ ಸಮಾಜಕ್ಕೆ ಪ್ರಯೋಜನವಾಗುತ್ತದೆ ಎಂದರು.
ಈ ಸಂದರ್ಭ ಡಾ. ಅಖಿಲ್ ಕುಟ್ಟಪ್ಪ, ಅಶ್ವತ್ ಐಯ್ಯಪ್ಪ ಬದುಕಿನ ಒಂದಷ್ಟು ಚಿತ್ರಣಗಳು, ಅವರ ಸಾಧನೆ ಗಳ ಬಗ್ಗೆ ಬೆಳಕು ಚೆಲ್ಲಲಾಯಿತು. ಅಶ್ವತ್ ಐಯ್ಯಪ್ಪ ಬರೆದ ‘ವೆನ್ ಗಾಡ್ ಬೌಲ್ಸ್ ಅ ಗೂಗ್ಲಿ’ ಪುಸ್ತಕ ಅನಾವರಣ ಗೊಳಿಸಲಾಯಿತು. ಮಡಿಕೇರಿ ಮೂಡಾ ಮಾಜಿ ಅಧ್ಯಕ್ಷ ಮುನೀರ್ ಅಹಮದ್, ಕೊಡವ ಎಜುಕೇಷನ್ ಸೊಸೈಟಿ ಉಪಾಧ್ಯಕ್ಷ ಕೆ.ಎ. ಚಿಣ್ಣಪ್ಪ, ಕಾರ್ಯದರ್ಶಿ ಚಿರಿಯಪಂಡ ಪಿ. ರಾಕೇಶ್ ಪೂವಯ್ಯ, ಪ್ರಾಂಶುಪಾಲ ಡಾ. ಬಸವರಾಜು, ಕ್ಯಾಂಪಸ್ ಆಡಳಿತ ಅಧಿಕಾರಿ ಜೀವನ್ ಚಿಣ್ಣಪ್ಪ ಇದ್ದರು.