ಗೋಣಿಕೊಪ್ಪಲು, ಮಾ. ೨೮: ವಾಣಿಜ್ಯ ನಗರ ಎಂದೇ ಪ್ರಸಿದ್ಧಿ ಪಡೆದಿರುವ ಗೋಣಿಕೊಪ್ಪ ನೂತನ ಬಸ್ ನಿಲ್ದಾಣಕ್ಕೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಭೂಮಿಪೂಜೆ ನೆರವೇರಿಸಿದರು.
ಕಳೆದ ಕೆಲವು ತಿಂಗಳ ಹಿಂದೆ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯರ ನಿಯೋಗವು ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರ
ಸಮ್ಮುಖದಲ್ಲಿ ರಾಜ್ಯದ ಮುಖ್ಯಮಂತ್ರಿಯವರನ್ನು ಭೇಟಿ ಮಾಡುವ
ಮೂಲಕ ಒಂದು ಕೋಟಿ ಅನುದಾನ ಬಿಡುಗಡೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು.
(ಮೊದಲ ಪುಟದಿಂದ) ಈ ವೇಳೆ ಮಾತನಾಡಿದ ಶಾಸಕರು, ಮೊದಲ ಹಂತದಲ್ಲಿ ಒಂದು ಕೋಟಿ ಅನುದಾನ ಸರ್ಕಾರ ನೀಡಿದೆ. ಹಂತ ಹಂತವಾಗಿ ಮುಂದಿನ ಅನುದಾನ ಸರ್ಕಾರದ ವತಿಯಿಂದ ಬಿಡುಗಡೆ ಆಗಲಿದೆ ಎಂದರು.
ರೂ. ೫ ಕೋಟಿ ವೆಚ್ಚದಲ್ಲಿ ನೂತನ ನಿಲ್ದಾಣ ನಿರ್ಮಾಣವಾಗಲಿದ್ದು, ಮೊದಲ ಹಂತದಲ್ಲಿ ರಾಜ್ಯ ಸರ್ಕಾರ ಒಂದು ಕೋಟಿ ಅನುದಾನ ಬಿಡುಗಡೆ ಮಾಡಿದೆ. ಕಳೆದ ಎಂಟು ವರ್ಷಗಳಿಂದ ಸುಸಜ್ಜಿತ ಬಸ್ ನಿಲ್ದಾಣವಿಲ್ಲದೆ ಇಲ್ಲಿನ ನಾಗರಿಕರು ಕಷ್ಟಕ್ಕೆ ಸಿಲುಕಿದ್ದರು. ಈ ಬಗ್ಗೆ ವಿವಿಧ ಸಂಘ ಸಂಸ್ಥೆಗಳು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು.
ಕಳೆದ ಎರಡು ವರ್ಷಗಳ ಹಿಂದೆ ಗೋಣಿಕೊಪ್ಪ ಗ್ರಾಮ ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ಈ ಬಗ್ಗೆ ಪ್ರಣಾಳಿಕೆ ಬಿಡುಗಡೆ ಮಾಡುವ ಮೂಲಕ ಜನರಿಗೆ ಭರವಸೆ ನೀಡಿದ್ದರು.
ಭೂಮಿಪೂಜೆ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮನ್ನಕ್ಕಮನೆ ಸೌಮ್ಯ ಬಾಲು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಕೆ. ಬೋಪಣ್ಣ, ಗ್ರಾ.ಪಂ. ಸದಸ್ಯರಾದ ಬಿ.ಎನ್. ಪ್ರಕಾಶ್, ಬೋಜಮ್ಮ, ಜಿ.ಕೆ. ಗೀತಾ, ಪುಷ್ಪಾ, ಚೈತ್ರ ಚೇತನ್, ವಿವೇಕ್ ರಾಯ್ಕರ್, ಹಕೀಮ್, ನೂರೇರ ರತಿ, ರಾಮದಾಸ್, ಚೇಂಬರ್ ಆಫ್ ಕಾಮರ್ಸ್ ಕಡೇಮಾಡ ಸುನೀಲ್ ಮಾದಪ್ಪ, ಉಪಾಧ್ಯಕ್ಷ ಪೊನ್ನಿಮಾಡ ಸುರೇಶ್, ಸದಸ್ಯ ಗಣೇಶ್ ರೈ, ಸೇರಿದಂತೆ ತಾ.ಪಂ. ಮಾಜಿ ಅಧ್ಯಕ್ಷೆ ರಾಣಿ ನಾರಾಯಣ, ಬಿಜೆಪಿ ಪ್ರಮುಖರಾದ ಗಿರೀಶ್ ಗಣಪತಿ, ಗುಮ್ಮಟೀರ ಕಿಲನ್ ಗಣಪತಿ, ನೆಲ್ಲಿರ ಚಲನ್ ಕುಮಾರ್, ಸುರೇಶ್ ರೈ, ಮಲ್ಚೀರ ಗಾಂಧಿ ದೇವಯ್ಯ, ಪಿಡಿಓ ಶ್ರೀನಿವಾಸ್, ಇನ್ನಿತರ ಪ್ರಮುಖರು ಇದ್ದರು.