ಮಡಿಕೇರಿ, ಮಾ. ೨೯: ರಾಜ್ಯ ವಿಧಾನಸಭೆಗೆ ಬಹುನಿರೀಕ್ಷೆಯಲ್ಲಿದ್ದ ಚುನಾವಣೆ ದಿನಾಂಕ ಪ್ರಕಟವಾಗುವುದರೊಂದಿಗೆ ಕರ್ನಾಟಕ ಕುರುಕ್ಷೇತ್ರದ ಮತಸಮರಕ್ಕೆ ವೇದಿಕೆ ಸಿದ್ಧಗೊಂಡಿದೆ. ಕೇಂದ್ರ ಚುನಾವಣಾ ಆಯೋಗ ಇಂದು ಕರ್ನಾಟಕ ವಿಧಾನಸಭೆ ಚುನಾವಣೆಯ ವಿವರಗಳನ್ನು ಪ್ರಕಟಿಸಿದೆ.

ಮೇ ೧೦ ರಂದು ರಾಜ್ಯದ ಎಲ್ಲಾ ೨೨೪ ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮತದಾನ ನಡೆದ ಮೂರೇ ದಿನಗಳಲ್ಲಿ ಅಂದರೆ ಮೇ ೧೩ ರಂದೇ ಫಲಿತಾಂಶ ಹೊರಬೀಳಲಿದೆ. ಇಡೀ ಕರುನಾಡು ಪ್ರಸ್ತುತ ಚುನಾವಣೆಯ ಬಿಸಿಯಲ್ಲಿದ್ದು ಯಾವ ಕ್ಷಣದಲ್ಲಿ ಅಧಿಕೃತ ದಿನಾಂಕ ಪ್ರಕಟಗೊಳ್ಳುವುದು ಎಂಬ ನಿರೀಕ್ಷೆಯಲ್ಲಿ ರಾಜ್ಯದ ಜನರಿದ್ದರು.

ಇಂದು ದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯೋಗ ಸುದ್ದಿಗೋಷ್ಠಿ ನಡೆಸಿದ್ದು ಸಂಪೂರ್ಣ ವಿವರಗಳನ್ನು ಪ್ರಕಟಿಸಿದೆ. ವಿಜ್ಞಾನಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಚುನಾವಣೆಯ ಮಾಹಿತಿಗಳನ್ನು ನೀಡಿದ್ದಾರೆ.

ರಾಜ್ಯದಲ್ಲಿ ಮಾರ್ಚ್ ೨೯ ರಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ . ಏಪ್ರಿಲ್ ೧೩ ರಂದು ಅಧಿಸೂಚನೆ ಪ್ರಕಟಗೊಳ್ಳಲಿದ್ದು ಏಪ್ರಿಲ್ ೨೦ ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿದೆ. ೨೧ ರಂದು ನಾಮಪತ್ರಗಳ ಪರಿಶೀಲನೆ, ೨೪ ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು ಮೇ ೧೦ ರಂದು ಮತದಾನ ಹಾಗೂ ಮೇ ೧೩ ರಂದು ಫಲಿತಾಂಶ ಹೊರಬೀಳಲಿದೆ.

೫ ಕೋಟಿ ಮತದಾರರು

೧೫ನೆಯ ವಿಧಾನಸಭೆಯ ಪ್ರಸ್ತುತದ ಅಧಿಕಾರಾವಧಿ ಮೇ ೨೪ಕ್ಕೆ ಮುಕ್ತಾಯಗೊಳ್ಳಲಿದ್ದು ೧೬ನೇ ವಿಧಾನಸಭೆಗೆ ಚುನಾವಣೆ ನಡೆಯಬೇಕಾಗಿದೆ. ಪ್ರಸ್ತುತ ವರ್ಷದ ಚುನಾವಣೆಯಲ್ಲಿ ಕರ್ನಾಟಕದ ೫ ಕೋಟಿ ೨೧ ಲಕ್ಷ ಮಂದಿ ಮತ ಚಲಾಯಿಸಲು ಅರ್ಹರಾಗಿರುತ್ತಾರೆ. ೨ ಕೋಟಿ ೬೨ ಲಕ್ಷ ೪೨ ಸಾವಿರದ ೫೬೧ ಪುರುಷರು ಹಾಗೂ ೨ ಕೋಟಿ ೫೯ ಲಕ್ಷ ೨೬ ಸಾವಿರದ ೩೧೯ ಮಹಿಳೆಯರು ಮತದಾನಕ್ಕೆ ಅರ್ಹರಾಗಿದ್ದಾರೆ. ರಾಜ್ಯದಲ್ಲಿ ಲಿಂಗ ಪರಿವರ್ತಿತ (ಟ್ರಾನ್ಸ್ಜೆಂಡರ್) ೪೨,೭೫೬ ಮಂದಿಯ ಪೈಕಿ ೪೧,೩೧೨ ಮಂದಿ ಮತದಾನಕ್ಕೆ ಅರ್ಹರಿದ್ದಾರೆ. ೪,೬೯೯ ತೃತೀಯ ಲಿಂಗಿಗಳು, ೫,೫೫,೦೭೩ ವಿಶೇಷಚೇತನರು ಮತದಾನಕ್ಕೆ ಅರ್ಹರಿದ್ದಾರೆ. ಪ್ರಸ್ತುತ ವರ್ಷದ ಏಪ್ರಿಲ್ ೧ ರೊಳಗೆ ೧೮ ವರ್ಷ ತುಂಬಿದವರೂ ಮತ ಚಲಾಯಿಸಬಹುದಾಗಿದ್ದು, ಈ ಬಾರಿ ೯,೧೭,೨೪೧ ಮೊದಲ ಬಾರಿಯ (೧೮ ರಿಂದ ೧೯ ವರ್ಷದವರು) ಮತದಾರರಿದ್ದಾರೆ.

ಚುನಾವಣಾ ಪ್ರಚಾರಕ್ಕೆ ಲೌಡ್‌ಸ್ಪೀಕರ್ ಬಳಕೆ ನಿಷೇಧ

ಚುನಾವಣೆ ಘೋಷಣೆಯಾದ ದಿನದಿಂದ (ಮಾರ್ಚ್ ೨೯) ಫಲಿತಾಂಶದ ದಿನದವರೆಗೆ (ಮೇ ೧೩)ಸಾರ್ವಜನಿಕ ಮಾಹಿತಿ ಪ್ರಸರಣಾ ಮಾಧ್ಯಮಗಳು, ಲೌಡ್‌ಸ್ಪೀಕರ್‌ಗಳು ಅಥವಾ ಸೌಂಡ್ ಆಂಪ್ಲಿಫೈಯರ್‌ಗಳನ್ನು ರಾತ್ರಿ ೧೦ ರಿಂದ ಮುಂದಿನ ದಿನ ಬೆಳಿಗ್ಗೆ ೬ ಗಂಟೆಯವರೆಗೆ ಚುನಾವಣಾ ಪ್ರಚಾರಕ್ಕಾಗಿ ಬಳಸುವುದನ್ನು ನಿಷೇಧಿಸಲಾಗಿದೆ.

ಸಂಶಯಾಸ್ಪದವಾಗಿ ೧ ಲಕ್ಷಕ್ಕೂ ಅಧಿಕ ಹಣವನ್ನು ಬ್ಯಾಂಕಿಗೆ ಜಮಾ ಮಾಡುವುದು, ಪಡೆಯುವುದನ್ನು ಜಿಲ್ಲಾ ಚುನಾವಣಾ ಅಧಿಕಾರಿ ಪರಿಶೀಲಿಸಿ ಕ್ರಮ ಕೈಗೊಳ್ಳುವ ಅಧಿಕಾರ ಹೊಂದಿದ್ದಾರೆ. ೧೦ ಲಕ್ಷಕ್ಕೂ ಅಧಿಕ ಹಣವಾದರೆ, ಚುನಾವಣಾಧಿಕಾರಿಗಳು ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಿ ಕ್ರಮ ಕೈಗೊಳ್ಳಲಾಗುತ್ತದೆ.

೫೮,೨೮೨ ಮತಗಟ್ಟೆಗಳು

ಮೇ ೧೦ ರಂದು ನಡೆಯುವ ಚುನಾವಣೆಗೆ ಗ್ರಾಮೀಣ ಭಾಗದ ೩೪,೨೧೯ ಹಾಗೂ ನಗರ ಪ್ರದೇಶಗಳ ೨೪,೦೬೩ ಮತಗಟ್ಟೆಗಳು ಸೇರಿ ಒಟ್ಟು ೫೮,೨೮೨ ಮತಗಟ್ಟೆಗಳು ಕಾರ್ಯಚರಿಸಲಿವೆ. ಈ ಪೈಕಿ ೧೨,೦೦೦ ಸೂಕ್ಷö್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಜೇನುಕುರುಬ, ಕಾಡುಕುರುಬ ಮತದಾರರಿಗೆÀ ಪ್ರತ್ಯೇಕ ಬೂತ್ ವ್ಯವಸ್ಥೆ ಮಾಡಲಾಗಿದೆ. ಒಟ್ಟು ೧,೩೨೦ ಮತಗಟ್ಟೆಗಳಲ್ಲಿ ಸಂಪೂರ್ಣ ಮಹಿಳಾ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ೨೨೪ ಕ್ಷೇತ್ರಗಳಲ್ಲಿ ತಲಾ ಒಂದರAತೆ ಯುವ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ. ಇಲ್ಲಿ ಯುವಕರೇ ಕಾರ್ಯನಿರ್ವಹಿಸಲಿದ್ದಾರೆ. ಗುಡ್ಡಗಾಡು ವ್ಯಾಪ್ತಿಯ ಜನರಿಗೆ ೪೦ಕ್ಕೂ ಹೆಚ್ಚು ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಚುನಾವಣೆ - ೨೦೨೩

ಮಾ.೨೯ ರಿಂದಲೇ ನೀತಿ ಸಂಹಿತೆ ಜಾರಿ

ಏ.೧೩ ರಂದು ಅಧಿಸೂಚನೆ ಪ್ರಕಟ

ಏ.೨೦ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ

ಏ.೨೧ ನಾಮಪತ್ರ ಪರಿಶೀಲನೆ

ಏ.೨೪ ವಾಪಸಾತಿಗೆ ಕೊನೆಯ ದಿನ

ಮೇ ೧೦. ಮತದಾನ -೧೩ಕ್ಕೆ ಫಲಿತಾಂಶ