(ಕಾಯಪಂಡ ಶಶಿ ಸೋಮಯ್ಯ)
ಮಡಿಕೇರಿ, ಮಾ. ೨೮: ಕ್ರೀಡಾ ಜಿಲ್ಲೆ ಖ್ಯಾತಿಯ ಕೊಡಗಿನಲ್ಲೀಗ ಕ್ರೀಡಾ ಹಬ್ಬಗಳ ಸಂಭ್ರಮ ಮನೆಮಾಡಿದೆ. ವಿವಿಧ ರೀತಿಯ ಕ್ರೀಡಾಕೂಟಗಳು, ಜನಾಂಗೀಯ ಕ್ರೀಡೆಗಳು ಅಲ್ಲಲ್ಲಿ ಜರುಗುತ್ತಿವೆ. ೧೯೯೭ರಲ್ಲಿ ಕೊಡವ ಕುಟುಂಬಗಳ ನಡುವಿನ ಹಾಕಿ ಉತ್ಸವ ಹಬ್ಬದ ರೀತಿಯಲ್ಲಿ ಆರಂಭಗೊAಡ ನಂತರದಲ್ಲಿ ಜಿಲ್ಲೆಯಲ್ಲಿ ಕ್ರೀಡಾಹಬ್ಬಗಳು ವಿಶೇಷತೆ ಪಡೆದುಕೊಂಡಿವೆ. ಇದೀಗ ಹಗ್ಗಜಗ್ಗಾಟ ಸ್ಪರ್ಧೆಯೂ ಕೂಡ ಕ್ರೀಡಾ ಹಬ್ಬದ ಸ್ವರೂಪ ಪಡೆದುಕೊಳ್ಳುತ್ತಿರುವುದು ಮತ್ತೊಂದು ಬೆಳವಣಿಗೆಯಾಗಿದೆ.
ಕಳೆದ ವರ್ಷ ಕಕ್ಕಬೆಯಲ್ಲಿ ಪೊನ್ನೋಲತಂಡ ಕುಟುಂಬ ಕೊಡವ ಕುಟುಂಬಗಳ ನಡುವೆ ಹಗ್ಗಜಗ್ಗಾಟ ಸ್ಪರ್ಧೆಯನ್ನು ಆಯೋಜನೆ ಮಾಡಿತ್ತು. ಇದೀಗ ಈ ಕೌಟುಂಬಿಕ ಸ್ಪರ್ಧೆಯನ್ನು ಟಿ. ಶೆಟ್ಟಿಗೇರಿ-ನೆಮ್ಮಲೆ ಗ್ರಾಮದ ಚೆಟ್ಟಂಗಡ ಕುಟುಂಬ ಈ ವರ್ಷ ಮುಂದುವರಿಸುತ್ತಿದ್ದು, ಇದಕ್ಕೂ ಉತ್ಸವದ ಮಾದರಿಯ ಸ್ಪರ್ಶವನ್ನು ನೀಡಿದೆ.
ಏಪ್ರಿಲ್ ೨ ರಿಂದ ೪ರ ತನಕ ಟಿ. ಶೆಟ್ಟಿಗೇರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಕೊಡವ ಒಕ್ಕಡೊಕ್ಕಡ ಕೇರ್ ಬಲಿ ನಮ್ಮೆ-೨೦೨೩ ಆಯೋಜಿತವಾಗಿದೆ.
ಕೊಡವ ಟಗ್ ಆಫ್ ವಾರ್ ಅಕಾಡೆಮಿಯನ್ನೂ ರಚಿಸಲಾಗಿದ್ದು, ಇದರ ಮೂಲಕ ಹಗ್ಗಜಗ್ಗಾಟ ಸ್ಪರ್ಧೆಯನ್ನು ಬೇರೆ ಬೇರೆ ಕುಟುಂಬಗಳು ನಡೆಸಲು ಮುಂದಾಗುತ್ತಿವೆ. ಎರಡನೇ ವರ್ಷದ ಈ ಸ್ಪರ್ಧೆಯನ್ನು ಚೆಟ್ಟಂಗಡ ಕುಟುಂಬ ನಡೆಸುತ್ತಿದೆ. ಕಳೆದ ವರ್ಷ ೪೨ ಕುಟುಂಬಗಳು ಭಾಗಿಯಾಗಿದ್ದವು. ಈ ಬಾರಿ ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾದ ಸ್ಪರ್ಧೆಯನ್ನು ನಡೆಸಲಾಗುತ್ತಿದೆ.
ಪುರುಷರ ವಿಭಾಗದಲ್ಲಿ ೧೦೨ ಕುಟುಂಬಗಳು ಹಾಗೂ ಮಹಿಳಾ ವಿಭಾಗದಲ್ಲಿ ೭೫ ಕುಟುಂಬಗಳು ಪಾಲ್ಗೊಳ್ಳುತ್ತಿರುವುದು ಈ ಬಾರಿಯ ವಿಶೇಷವಾಗಿದೆ.
ಟಿ. ಶೆಟ್ಟಿಗೇರಿ ಸಿದ್ಧ
ಕೇರ್ ಬಲಿ ನಮ್ಮೆಗೆ ಟಿ. ಶೆಟ್ಟಿಗೇರಿ ಸಜ್ಜಾಗಿದೆ. ಸ್ಥಳೀಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಈ ಸ್ಪರ್ಧೆಗಾಗಿ ಒಟ್ಟು ನಾಲ್ಕು ಪಿಚ್ಗಳನ್ನು (ಮೈದಾನ) ಸಿದ್ಧಪಡಿಸಲಾಗಿದೆ.
ಒಂದು ತಂಡದಲ್ಲಿ ೭+೩ ಸ್ಪರ್ಧಿಗಳಿಗೆ ಅವಕಾಶವಿದೆ. ೭ ಸ್ಪರ್ಧಿಗಳು ಹಗ್ಗ ಎಳೆಯುವ ಸಾಹಸ ಮಾಡಬೇಕಿದೆ. ಮೂರು ದಿನಗಳ ಕಾಲದ
(ಮೊದಲ ಪುಟದಿಂದ) ಸ್ಪರ್ಧೆಯಲ್ಲಿ ಎಲ್ಲರಿಗೂ ಅಪರಾಹ್ನದ ಭೋಜನದ ವ್ಯವಸ್ಥೆಯೂ ಇರಲಿದೆ.
ಭಾರೀ ಬಹುಮಾನವೂ ವಿಜೇತರಿಗೆ ಸಿಗಲಿದೆ. ಪುರುಷ ಹಾಗೂ ಮಹಿಳೆಯರ ಎರಡೂ ವಿಭಾಗದ ವಿಜೇತರಿಗೆ ಕ್ರಮವಾಗಿ ತಲಾ ರೂ. ೫೦ ಸಾವಿರ ನಗದು ಹಾಗೂ ಟ್ರೋಫಿ, ರೂ. ೩೦ ಸಾವಿರ ನಗದು ಹಾಗೂ ಟ್ರೋಫಿ ಮತ್ತು ಮೂರನೇ ಸ್ಥಾನಕ್ಕೆ ರೂ. ೨೦ ಸಾವಿರ ನಗದು ಹಾಗೂ ಟ್ರೋಫಿ ಬಹುಮಾನವಾಗಿ ಸಿಗಲಿದೆ. ಎಲ್ಲಾ ಪರಾಜಿತ ತಂಡಕ್ಕೂ ಆಯೋಜಕರು ಸ್ಮರಣಿಕೆಯನ್ನು ನೀಡುತ್ತಿದ್ದಾರೆ. ಸ್ಪರ್ಧೆಯನ್ನು ೫ ಜನರ ತಾಂತ್ರಿಕ ಸಮಿತಿ ನಿರ್ವಹಿಸಲಿದೆ. ಪಂದ್ಯಾವಳಿ ನಿರ್ದೇಶಕರಾಗಿ ಕೊಡವ ಟಗ್ ಆಫ್ವಾರ್ ಅಕಾಡೆಮಿ ಅಧ್ಯಕ್ಷ ಪೊನ್ನೋಲತಂಡ ಕಿರಣ್ ಅವರು ಕಾರ್ಯನಿರ್ವಹಿಸಲಿದ್ದಾರೆ.
ಅಂದಾಜು ರೂ. ೧೦ ಲಕ್ಷ ವೆಚ್ಚ
ಈ ಸ್ಪರ್ಧೆಯನ್ನು ಅಂದಾಜು ರೂ. ೧೦ ಲಕ್ಷ ವೆಚ್ಚದಲ್ಲಿ ಆಯೋಜಿಸಲಾಗುತ್ತಿದೆ. ಯಶಸ್ಸಿಗಾಗಿ ಚೆಟ್ಟಂಗಡ ಕುಟುಂಬದ ಮುಖ್ಯ ಸಮಿತಿಯೊಂದಿಗೆ ಇತರ ಹತ್ತು ಉಪ ಸಮಿತಿಗಳನ್ನು ರಚಿಸಲಾಗಿದೆ. ಸಮಿತಿಯ ಅಧ್ಯಕ್ಷರಾಗಿ ಚೆಟ್ಟಂಗಡ ವಿಜಯ್ ಕಾರ್ಯಪ್ಪ, ಕಾರ್ಯದರ್ಶಿಯಾಗಿ ರವಿ ಸುಬ್ಬಯ್ಯ, ಸಹ ಕಾರ್ಯದರ್ಶಿಯಾಗಿ ಕಂಬ ಕಾರ್ಯಪ್ಪ, ಖಜಾಂಚಿಯಾಗಿ ವಿನಯ್ ಬೆಳ್ಯಪ್ಪ ಹಾಗೂ ಪದಾಧಿಕಾರಿಗಳೊಂದಿಗೆ ಸ್ವಾಗತ ಸಮಿತಿ, ವೇದಿಕೆ ಹಾಗೂ ಸಾಂಸ್ಕೃತಿಕ ಸಮಿತಿ, ಮೈದಾನ ಸಮಿತಿ, ಊಟೋಪಚಾರ, ಸ್ವಚ್ಛತೆ, ವೈದ್ಯಕೀಯ, ಶಿಸ್ತು, ಹಣಕಾಸು, ಪ್ರಚಾರ ಹಾಗೂ ತಾಂತ್ರಿಕ ಸಮಿತಿಗಳನ್ನು ಮಾಡಿಕೊಳ್ಳಲಾಗಿದೆ ಎಂದು ಉತ್ಸವ ಸಮಿತಿ ಪ್ರಮುಖರು ತಿಳಿಸಿದ್ದಾರೆ.
ಸಂಭ್ರಮದ ಉದ್ಘಾಟನೆ
ಏಪ್ರಿಲ್ ೨ರ ಭಾನುವಾರದಂದು ಉದ್ಘಾಟನಾ ಸಮಾರಂಭ ಅದ್ಧೂರಿಯಾಗಿ ನಡೆಯಲಿದೆ. ಟಿ. ಶೆಟ್ಟಿಗೇರಿಯ ತಾವಳಗೇರಿ ಮೂಂದ್ನಾಡ್ ಕೊಡವ ಸಮಾಜದಿಂದ ಮೈದಾನದ ತನಕ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ. ಕೊಂಬ್ ಕೊಟ್ಟ್ ವಾಲಗ, ದುಡಿಕೊಟ್ಟ್ ಪಾಟ್, ತಳಿಯತಕ್ಕಿ ಬೊಳಕ್ ಸಹಿತ ಕೊಡವ ಸಾಂಪ್ರದಾಯಿಕ ಧಿರಿಸಿನಲ್ಲಿ ಮೆರವಣಿಗೆ ಜರುಗಲಿದೆ. ಬಳಿಕ ಮೈದಾನ ಉದ್ಘಾಟನೆ, ಚೆಟ್ಟಂಗಡ ಕುಟುಂಬದ ಮಹಿಳೆಯರಿಂದ ಉಮ್ಮತ್ತಾಟ್ನೊಂದಿಗೆ ಗುಂಡು ಹಾರಿಸುವ ಮೂಲಕ ಸ್ಪರ್ಧೆಗೆ ಚಾಲನೆ ಸಿಗಲಿದೆ.
ಪ್ರದರ್ಶನ ಸ್ಪರ್ಧೆ
ಉದ್ಘಾಟನೆ ಅಂಗವಾಗಿ ಎರಡು ಪ್ರದರ್ಶನ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಪುರುಷರ ಸ್ಪರ್ಧೆಯಾಗಿ ಶ್ರೀಮಂಗಲ ನಾಡ್ ಕೊಡವ ಸಮಾಜ ಹಾಗೂ ಟಿ. ಶೆಟ್ಟಿಗೇರಿಯ ತಾವಳಗೇರಿ ಮೂಂದ್ನಾಡ್ ಕೊಡವ ಸಮಾಜ ಮತ್ತು ಮಹಿಳೆಯರ ಸ್ಪರ್ಧೆಯಾಗಿ ಬಾಂಡಿAಗ್ ಬ್ಲೂಮ್ಸ್ ಪೊಮ್ಮಕ್ಕಡ ತಂಡ ಹಾಗೂ ಸಂಭ್ರಮ ಪೊಮ್ಮಕ್ಕಡ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಸ್ಥೆ ತಂಡಗಳ ನಡುವೆ ಪ್ರದರ್ಶನ ಸ್ಪರ್ಧೆ ಜರುಗಲಿದೆ.
ಸಾಂಸ್ಕೃತಿಕ ಕಾರ್ಯಕ್ರಮ
ಏಪ್ರಿಲ್ ೪ ರಂದು ಸಮಾರೋಪದ ಬಳಿಕ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮವಿದೆ. ಚೆಟ್ಟಂಗಡ ಕುಟುಂಬಸ್ಥರ ಕಾರ್ಯಕ್ರಮ ತಲಕಾವೇರಿಕ್ ತಿಂಗಕೋರ್ ಮೊಟ್ಟ್ ತಂಡದಿAದ ಕಾರ್ಯಕ್ರಮ ಹಾಗೂ ಬಳಿಕ ಕೊಡವ ನೈಟ್ಸ್ (ಆರ್ಕೆಸ್ಟಾç) ಕಾರ್ಯಕ್ರಮದೊಂದಿಗೆ ಕೇರ್ ಬಲಿ ನಮ್ಮೆ ಮುಕ್ತಾಯಗೊಳ್ಳಲಿದೆ.