ಪಾಲಿಬೆಟ್ಟ, ಮಾ. ೨೮: ಕಳೆದ ೨೦ ವರ್ಷಗಳಿಂದ ಅಗಲೀಕರಣ ಹಾಗೂ ಅಭಿವೃದ್ಧಿಗೊಳ್ಳದ ಅತ್ತಿಮಂಗಲ, ಅರೆಕಾಡು, ಹೊಸ್ಕೇರಿ-ಮರಗೋಡು ಗ್ರಾಮಕ್ಕೆ ಸಂಪರ್ಕಿಸುವ ಮುಖ್ಯ ರಸ್ತೆಗೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಅಭಿವೃದ್ಧಿಯ ಹೆಸರಿನಲ್ಲಿ ರಸ್ತೆ ಒಂದು ಬದಿಯಲ್ಲಿ ಗುಂಡಿ ತೋಡಿ ಬಿಡಲಾಗಿದ್ದು, ಮತ್ತೊಂದು ಬದಿಯಲ್ಲಿ ತೋಡಿದ ಗುಂಡಿಗೆ ಜಲ್ಲಿ ಸುರಿದು ಕಾಮಗಾರಿಯನ್ನ ಅರ್ಧದಲ್ಲೇ ಬಿಟ್ಟು ಹೋಗಿ ತಿಂಗಳುಗಳು ಕಳೆದರೂ ಇಂದಿಗೂ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಿಲ್ಲ. ಇದ್ದ ರಸ್ತೆಯೂ ಹಾಳಾಗಿ ಸಾರ್ವಜನಿಕರು. ವಾಹನ ಸವಾರರು ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಡಬೇಕಾಗಿದೆ. ರಸ್ತೆಯನ್ನು ಕೂಡಲೇ ಅಭಿವೃದ್ಧಿಪಡಿಸದಿದ್ದಲ್ಲಿ ರಸ್ತೆತಡೆ, ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಅರೇಕಾಡು ಹಾಗೂ ಹೊಸ್ಕೇರಿಯ ಸ್ಥಳೀಯರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮದ ನಿವಾಸಿ ಚೇರಂಡ ಸುಭಾಷ್ ಮಾತನಾಡಿ ಗ್ರಾಮದವರಿಗೆ ಮಾಹಿತಿ ಇಲ್ಲದೆ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಿದ್ದು ಇದೀಗ ಕಾಮಗಾರಿ ಸ್ಥಗಿತಗೊಳಿಸಿ ರಸ್ತೆ ಅಭಿವೃದ್ಧಿಗೆ ಬಳಸಿದ ಯಂತ್ರೋಪಕರಣಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಗ್ರಾಮಸ್ಥರು ಇದರ ಬಗ್ಗೆ ಯಾರನ್ನು ಪ್ರಶ್ನೆ ಮಾಡಬೇಕಾಗಿದೆ ಎಂಬುದು ಗೊತ್ತಿಲ್ಲದಂತಾಗಿದೆ. ರಸ್ತೆಯ ಒಂದು ಭಾಗದಲ್ಲಿ ಗುಂಡಿ ತೋಡಿ ಹಾಗೆ ಬಿಡಲಾಗಿದ್ದು ಮತ್ತೊಂದು ಬದಿಯಲ್ಲಿ ಕಲ್ಲುಗಳನ್ನು ಸುರಿದಿರುವುದರಿಂದ ವಾಹನ ಚಲಾಯಿಸಲು ಹರಸಾಹಸ ಪಡಬೇಕಾಗಿದೆ. ಬೆಳೆಗಾರರು, ಶಾಲಾ ವಿದ್ಯಾರ್ಥಿಗಳು, ಕಾರ್ಮಿಕರು, ಸ್ಥಳೀಯರು ನಡೆದಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಜಲ್ಲಿಕಲ್ಲು ಧೂಳಿನಿಂದ ಸಾರ್ವಜನಿಕರಿಗೆ ಸಮಸ್ಯೆಯಾಗಿದೆ. ಕೂಡಲೇ ರಸ್ತೆ ಕಾಮಗಾರಿಯನ್ನ ಪೂರ್ಣಗೊಳಿ ಸದಿದ್ದಲ್ಲಿ ಪ್ರತಿಭಟನೆ ಮಾಡಬೇಕಾಗು ತ್ತದೆ ಎಂದು ಎಚ್ಚರಿಸಿದರು.
ಹೊಸ್ಕೇರಿ ಗ್ರಾಮದ ಬಲ್ಲಚಂಡ ಚಂದನ್ ಮಾತನಾಡಿ ಕಳೆದ ೨೦ ವರ್ಷಗಳಿಂದಲೂ ಅಭಿವೃದ್ಧಿ ಕಾಣದ ರಸ್ತೆಯನ್ನು ಅಭಿವೃದ್ಧಿಪಡಿಸಲು ಮುಂದಾಗಿದ್ದು ಇದೀಗ ಕಾಮಗಾರಿಯನ್ನ ಸ್ಥಗಿತಗೊಳಿಸಿ ತೆರಳಿದ್ದಾರೆ. ರಸ್ತೆ ಬದಿಯಲ್ಲಿರುವ ಗುಂಡಿ ಹಾಗೂ ಜಲ್ಲಿ ಕಲ್ಲುಗಳಿಂದ ದಿನನಿತ್ಯ ಸಂಚರಿಸುವ ವಾಹನ ಸವಾರರಿಗೆ ಸಮಸ್ಯೆಯಾಗಿದೆ. ಇತ್ತೀಚೆಗಷ್ಟೇ ಬೈಕ್ ಸವಾರನೊಬ್ಬ ಬಿದ್ದು ಕಾಲು ಮುರಿದುಕೊಂಡಿದ್ದಾನೆ. ಕಾಟಾಚಾರದ ಕಾಮಗಾರಿ ಮಾಡದೆ ರಸ್ತೆ ಅಭಿವೃದ್ಧಿ ಕಾರ್ಯವನ್ನ ಪೂರ್ಣಗೊಳಿಸದಿದ್ದಲ್ಲಿ ಎರಡೂ ಗ್ರಾಮಸ್ಥರನ್ನು ಒಗ್ಗೂಡಿಸಿ ರಸ್ತೆ ತಡೆ ಮಾಡುವ ಮೂಲಕ ಪ್ರತಿಭಟನೆ ಮಾಡಲಾಗುವುದು ಎಂದರು.
ಚೇರAಡ ಸುನೀಲ್ ಮಾತನಾಡಿ ಕಾಡು ಪ್ರಾಣಿಗಳ ಭಯದ ನಡುವೆ ಗುಂಡಿ ಬಿದ್ದ ರಸ್ತೆಯಲ್ಲಿ ಜೀವಭಯ ದೊಂದಿಗೆ ಸಂಚರಿಸು ವಂತಾಗಿದೆ. ತಿಂಗಳುಗಳ ಹಿಂದೆ ರಸ್ತೆ ಕಾಮಗಾರಿ ಪ್ರಾರಂಭಿಸಿ ಸ್ಥಗಿತಗೊಳಿಸಿ ದ್ದಾರೆ. ವಿದ್ಯಾರ್ಥಿಗಳು, ಕಾರ್ಮಿಕರು, ರೈತರು, ಮುಖ್ಯರಸ್ತೆಯನ್ನ ಅವಲಂಬಿತರಾಗಿದ್ದು ಹೆಚ್ಚಿನ ಬಸ್ ಸಂಚಾರವು ಇಲ್ಲದೆ ಇದೀಗ ಅಭಿವೃದ್ಧಿಗೊಳ್ಳದ ರಸ್ತೆಯಿಂದ ಖಾಸಗಿ ವಾಹನಗಳು ಗ್ರಾಮದತ್ತ ಬಾರದೆ ಸಾರ್ವಜನಿಕರು ಸಮಸ್ಯೆ ಎದುರಿಸು ವಂತಾಗಿದೆ. ಮಳೆಗಾಲ ಸಮೀಪಿಸುತ್ತಿದ್ದು, ಮಳೆ ಸುರಿಯ ಲಾರಂಭಿಸಿದರೆ ರಸ್ತೆಯಲ್ಲಿ ವಾಹನ ಸಂಚಾರ ಸಾಧ್ಯವಾಗದಂತಹ ಸ್ಥಿತಿ ಎದುರಾಗುತ್ತದೆ. ಕೂಡಲೇ ರಸ್ತೆ ದುರಸ್ತಿ ಪಡಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭ ಗ್ರಾಮದ ಪ್ರಮುಖರಾದ ಬಲ್ಲಚಂಡ ಮುತ್ತಣ್ಣ, ಅನ್ನಾರ್ಕಂಡ ವಿಜು, ಬಲ್ಲಚಂಡ ಮಾದಪ್ಪ, ಶ್ರೀನಿವಾಸ್, ಭರತ್, ವೆಂಕಟೇಶ್, ಪ್ರದೀಪ್, ಅಭಿ, ಸುನಿಲ್, ನರಸಿಂಹ, ನಾಸರ್, ಆರ್ಶದ್, ದರ್ಶನ್ ಸೇರಿದಂತೆ ಮತ್ತಿತರರು ಇದ್ದರು. ವರದಿ: ಪುತ್ತಂ ಪ್ರದೀಪ್