ಮಡಿಕೇರಿ, ಮಾ.೨೯: ತಾನು ಶಾಸಕನಾಗಿ ಗೆದ್ದು ಬಂದರೆ ಕೊಡಗು ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸ್ಥಾಪನೆಗೆ ಅವಿರತ ಶ್ರಮ ಪಡುವುದಾಗಿ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್.ಪೊನ್ನಣ್ಣ ಭರವಸೆ ನೀಡಿದ್ದಾರೆ.

ಕ್ಯಾಂಪ್ ನಿಶಾನಿ ಸಭಾಂಗಣದಲ್ಲಿ ತಾ. ೨೮ರ ಮಂಗಳವಾರ ನಡೆದ ಭಾಗಮಂಡಲ ವಲಯ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಭ್ರಷ್ಟಾಚಾರ ಮುಕ್ತ ಆಡಳಿತ ತಮ್ಮ ಮೊದಲ ಆದ್ಯತೆ ಎಂದರು. ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತರುವುದು ತನ್ನ ಗುರಿಯಾಗಿದೆ. ಎಲ್ಲಾ ರಸ್ತೆಗಳ ಅಭಿವೃದ್ಧಿ, ಪ್ರತಿಯೊಂದು ಕುಟುಂಬಕ್ಕೂ ಕುಡಿಯುವ ನೀರು, ಬಡ ಕುಟುಂಬಗಳಿಗೆ ನಿವೇಶನ, ಊರಿನ ಆಟದ ಮೈದಾನಗಳು ಮತ್ತು ಕ್ರೀಡಾಂಗಣಗಳ ಅಭಿವೃದ್ಧಿ, ಸರ್ಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ, ಭ್ರಷ್ಟಾಚಾರದ ನಿರ್ಮೂಲನೆಗೆ ಕ್ರಮ, ವನ್ಯಜೀವಿ- ಮಾನವ ಸಂಘರ್ಷ ತಡೆಗೆ ಪರಿಹಾರ ಸೇರಿದಂತೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.

ಭಾಗಮಂಡಲ ವಲಯ ಕಾಂಗ್ರೆಸ್ ಅಧ್ಯಕ್ಷ ದೇವಂಗೋಡಿ ಹರ್ಷ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ.ರಮೇಶ್, ಕೆಪಿಸಿಸಿ ಸದಸ್ಯ ಬೇಕಲ್ ರಮಾನಾಥ್ ಮಾತನಾಡಿದರು. ಭಾಗಮಂಡಲ ತಾವೂರಿನ ಹಲವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಬಾನಂಡ ಪ್ರಥ್ಯು, ಬ್ಲಾಕ್ ಅಧ್ಯಕ್ಷ ಇಸ್ಮಾಯಿಲ್, ಜಿಲ್ಲಾ ವಕ್ತಾರ ಟಾಟು ಮೊಣ್ಣಪ್ಪ, ಬೊಳ್ಳಂಡ ಗಿರೀಶ್ (ಶರಿ), ವೀರಾಜಪೇಟೆ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ಕೊಲ್ಯದ ಗಿರೀಶ್, ಹೆಚ್.ಕೆ.ರಾಜು, ಅಯ್ಯಂಗೇರಿ, ಸಣ್ಣಪುಲಿಕೋಟು ಮತ್ತು ಚೆಟ್ಟಿಮಾನಿಯ ಪಕ್ಷದ ಹಿರಿಯ ಮುಖಂಡರುಗಳು, ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯ ಸುನಿಲ್ ಪತ್ರಾವೋ ಸ್ವಾಗತಿಸಿ, ಪ್ರಮುಖರಾದ ಶರತ್ ವಂದಿಸಿದರು.

ಸನ್ಮಾನ: ಬೆಳ್ಳೂರು ನಿವಾಸದಲ್ಲಿ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿಯಾಗಿ ಘೋಷಣೆಯಾದ ನಂತರ ಕೋಣಗೇರಿ, ಹುದಿಕೇರಿ, ಬಾಳೆಲೆ, ಬಿ. ಶೆಟ್ಟಿಗೇರಿ, ಟಿ. ಶೆಟ್ಟಿಗೇರಿ, ಹೈಸೊಡ್ಲೂರು, ಕಾನೂರು, ಬಾಳೆಲೆ ಅಭಿಮಾನಿ ಬಳಗ ಪೊನ್ನಣ್ಣ ಅವರನ್ನು ಸನ್ಮಾನಿಸಿದರು. ಸಂವಿಧಾನದಲ್ಲಿ ರಾಜ್ಯಾಂಗವು ಸಂಪನ್ಮೂಲವನ್ನು ಜನತೆಗೆ ಸಮಾನವಾಗಿ ಹಂಚಬೇಕು. ಆದರೆ, ಕಾರ್ಯಾಂಗದ ನೀತಿ ರೂಪಿಸುವವರಿಗೆ ಕೊಡಗಿನ ಬಡತನ ಕಣ್ಣಿಗೆ ಕಾಣುತ್ತಿಲ್ಲ. ಕಳೆದ ೨೦ ವರ್ಷದಲ್ಲಿ ಕೊಡಗು ಅಭಿವೃದ್ಧಿ ಕಂಡಿಲ್ಲ. ರಸ್ತೆ, ವಿದ್ಯುತ್ ಹಾಗೂ ಕುಡಿಯುವ ನೀರಿನ ಸಮಸ್ಯೆ ಶಾಶ್ವತ ಪರಿಹಾರವಾಗಿಲ್ಲ. ಈ ನಿಟ್ಟಿನಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದರು.

ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಹುದಿಕೇರಿಯ ನೂರೇರ ಮನೋಹರ್, ಹಿರಿಯರಾದ ಚೆಕ್ಕೇರ ಸೋಮಯ್ಯ, ಚೆಕ್ಕೇರ ಕಾಳಯ್ಯ, ಹುದಿಕೇರಿ ವಿಎಸ್‌ಎಸ್‌ಎನ್ ಬ್ಯಾಂಕ್ ನಿರ್ದೇಶಕ ಬೊಳ್ಳಿಮಾಡ ಧನು ಮುಂತಾದವರು ಮಾತನಾಡಿದರು. ವೇದಿಕೆಯಲ್ಲಿ ರಾಜ್ಯ ವಕ್ತಾರ ಸಂಕೇತ್ ಪೂವಯ್ಯ, ಪಿ.ಕೆ. ಪೊನ್ನಪ್ಪ, ಹುದಿಕೇರಿ ವಲಯ ಕಾಂಗ್ರೆಸ್ ಅಧ್ಯಕ್ಷ ಸೂರಜ್, ಚೆಕ್ಕೇರ ವಾಸು ಕುಟ್ಟಪ್ಪ, ಯುವ ಕಾಂಗ್ರೆಸ್‌ನ ಅಂಕಿತ್ ಪೊನ್ನಣ್ಣ, ವಿ.ಎಲ್. ಲೋಕೇಶ್, ಕೊಲ್ಲೀರ ಬೋಪಣ್ಣ ಮುಂತಾದವರು ಉಪಸ್ಥಿತರಿದ್ದರು. ಎ.ಜೆ. ಬಾಬು ನಿರೂಪಿಸಿದರು.