ಮಡಿಕೇರಿ, ಮಾ. ೨೯: ಮೇ ೧೦ ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕೊಡಗಿನ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಪಣತೊಡುವಂತೆ ಬಿಜೆಪಿ ರೈತ ಮೋರ್ಚಾದ ರಾಜ್ಯಾಧ್ಯಕ್ಷ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಕಾರ್ಯಕರ್ತರಿಗೆ ಕರೆ ನೀಡಿದರು.
ಬಿಜೆಪಿ ರೈತ ಮೋರ್ಚಾ ವತಿಯಿಂದ ಮೂರ್ನಾಡು ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ರೈತ ಮೋರ್ಚಾ ಸಮಾವೇಶವನ್ನು ಗಿಡಕ್ಕೆ ನೀರೆರೆಯುವ ಮಾಲಕ ಉದ್ಘಾಟಿಸಿ ಅವರು ಮಾತನಾಡಿದರು. ರೈತರ ಆದಾಯವನ್ನು ದುಪ್ಪಟ್ಟು ಮಾಡುವ ನಿಟ್ಟಿನಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಾಕಷ್ಟು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಈ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ದೇಶದಲ್ಲಿ ರೈತರ ಆತ್ಮಹತ್ಯೆ ಹೆಚ್ಚಾದಾಗ ಸ್ವಾಮಿನಾಥನ್ ನೇತೃತ್ವದ ತಜ್ಞರ ಸಮಿತಿ ಸಮೀಕ್ಷೆ ನಡೆಸಿ ರೈತನ ಬೆಳೆಗೆ ಸೂಕ್ತ ಬೆಲೆ ಸಿಗದಿರುವುದೇ ಆತ್ಮಹತ್ಯೆ ಹೆಚ್ಚಾಗಲು ಕಾರಣ ಎಂದು ವರದಿ ತಯಾರಿಸಿ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲಿಸಿತ್ತು.
ಆದರೆ ಆ ವರದಿಯನ್ನು ಆಗಿನ ಕಾಂಗ್ರೆಸ್ ಸರ್ಕಾರ ನಿರ್ಲಕ್ಷಿಸಿತ್ತು. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಆ ವರದಿ ಅನ್ವಯ ರೈತನ ಬೆಳೆಗೆ ಉತ್ತಮ ಬೆಲೆ ಸಿಗುವಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ದೇಶದಲ್ಲಿ ಕಡಿಮೆ ಆಗಿದೆ ಎಂದು ಈರಣ್ಣ ಕಡಾಡಿ ಹೇಳಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೃಷಿಗೆ ಉತ್ತೇಜನ ನೀಡುತ್ತಿದ್ದು, ಇಂದು ದೇಶದ ರೈತರು ಸ್ವಾವಲಂಬಿಗಳಾಗಿದ್ದಾರೆ. ಇಲ್ಲಿ ಉತ್ಪಾದನೆ ಆಗುವ ಸಾಕಷ್ಟು ಉತ್ಪನ್ನಗಳು ಹತ್ತಾರು ದೇಶಗಳಿಗೆ ರಫ್ತಾಗುತ್ತಿದೆ. ರೈತ ಹಾಗೂ ಆತನ ಕುಟುಂಬ ಕಲ್ಯಾಣಕ್ಕಾಗಿ ಹತ್ತು ಹಲವಾರು ಯೋಜನೆಗಳನ್ನು ಜಾರಿಗೆ ತರುವ ಮೂಲಕ ರೈತನ ಏಳಿಗೆಯಾದರೆ ಮಾತ್ರ ಈ ದೇಶದ ಏಳಿಗೆಯೂ ಸಾಧ್ಯ ಎಂಬುದನ್ನು ಬಿಜೆಪಿ ಸರ್ಕಾರ ಸಾಬೀತು ಮಾಡಿದೆ ಎಂದರು.
ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚುರಂಜನ್ ಮಾತನಾಡಿ, ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಎಲ್ಲಾ ವರ್ಗದ ಜನರ ಬದುಕು ಹಸನಾಗಿದೆ. ಗೊಬ್ಬರಕ್ಕೆ ಸಬ್ಸಿಡಿ ನೀಡುವುದರ ಜೊತೆಗೆ ಪರಿಹಾರ ಹಣವನ್ನು ನೇರವಾಗಿ ರೈತರ ಖಾತೆಗಳಿಗೆ ಹಾಕುವ ಕೆಲಸವನ್ನು ಸರ್ಕಾರ ಮಾಡಿದೆ. ಈ ಹಿಂದಿನ ಕಾಂಗ್ರೆಸ್ ಸರ್ಕಾರ ಅಲ್ಪಮೊತ್ತದ ಪರಿಹಾರವನ್ನು ನೀಡುತ್ತಿತ್ತು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಪರಿಹಾರ ಹಣವನ್ನು ಹೆಚ್ಚು ಮಾಡಲಾಗಿದೆ. ನೀರಾವರಿಗೂ ಸಬ್ಸಿಡಿ ನೀಡಲಾಗಿದೆ. ಕುಡಿಯುವ ನೀರು ಪೂರೈಕೆಗೆ ಕೋಟ್ಯಂತರ ಅನುದಾನ ಲಭಿಸಿದೆ ಎಂದು ಹೇಳಿದರು.
ಕಾಂಗ್ರೆಸ್ ಜನರಿಗೆ ನೀಡುತ್ತಿರುವ ಗ್ಯಾರಂಟಿ ಕಾರ್ಡ್ ಬೋಗಸ್ ಕಾರ್ಡ್ ಎಂದು ಟೀಕಿಸಿದ ಅಪ್ಪಚ್ಚುರಂಜನ್ ಕಾಂಗ್ರೆಸ್ ನೀಡುತ್ತಿರುವ ಯಾವುದೇ ಭರವಸೆಗಳು ಈಡೇರಲು ಸಾಧ್ಯವಿಲ್ಲ ಎಂದರು. ೧೦ ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡುವುದಾಗಿ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆದರೆ ೧೦ ಕೆ.ಜಿ. ಅಕ್ಕಿಯಲ್ಲಿ ಕೇಂದ್ರ ಸರ್ಕಾರದ ಪಾಲೂ ಇದೆ ಎಂದು ಹೇಳಿದರು.
ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಬಿಜೆಪಿ ಸರ್ಕಾರ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಬಜೆಟ್ನಲ್ಲಿ ಕೃಷಿ ಕ್ಷೇತ್ರಕ್ಕೆ ಅತ್ಯಧಿಕ ಅನುದಾನವನ್ನು ಮೀಸಲಿಟ್ಟಿದೆ. ಅತಿವೃಷ್ಟಿ ಪರಿಹಾರ ಸೇರಿದಂತೆ ವನ್ಯ ಪ್ರಾಣಿಗಳ ಹಾವಳಿ ತಡೆಗೆ ಅಗತ್ಯ ಕ್ರಮಕೈಗೊಂಡಿದೆ. ಸರ್ವವ್ಯಾಪಿ, ಸರ್ವ ಸ್ಪರ್ಶಿ ಎಂಬ ನಿಲುವಿನೊಂದಿಗೆ ಬಿಜೆಪಿ ಕೆಲಸ ಮಾಡುತ್ತಿದೆ ಎಂದು ಹೇಳಿದರು (ಮೊದಲ ಪುಟದಿಂದ) ಮತಗಳಿಂದ ಗೆಲ್ಲಿಸಬೇಕೆಂದರು. ಯಾರಿಗೂ ಬೇಡವಾದ ಟಿಪ್ಪು ಜಯಂತಿಯನ್ನು ಆಚರಣೆ ಮಾಡಿ ಅಮಾಯಕ ಜೀವಗಳನ್ನು ಬಲಿ ಪಡೆದದ್ದೇ ಕಾಂಗ್ರೆಸ್ನ ಸಾಧನೆ ಎಂದು ಬೋಪಯ್ಯ ಟೀಕಿಸಿದರು.
ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಡಾ. ಬಿ.ಸಿ. ನವೀನ್ಕುಮಾರ್ ಮಾತನಾಡಿ, ಕೃಷಿಯು ಭಾರತದೊಂದಿಗೆ ಬೆರೆತು ಹೋಗಿದ್ದು, ಕೃಷಿ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಬಿಜೆಪಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿಗೆ. ಬಿಜೆಪಿ ಸರ್ಕಾರ ಬಂದ ನಂತರ, ರೈತರ ಅಭಿವೃದ್ಧಿ ಸಾಧ್ಯವಾಗಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿ, ಬಿಜೆಪಿಯು ಕೊಡಗನ್ನು ಕಾಂಗ್ರೆಸ್ ಮುಕ್ತಗೊಳಿಸಿದೆ. ಹಾಗೆಂದು ಕಾರ್ಯಕರ್ತರು ಮೈಮರೆಯುವಂತಿಲ್ಲ. ಬಿಜೆಪಿಯಿಂದ ಯಾರೇ ಅಭ್ಯರ್ಥಿಗಳಾದರೂ ಕೂಡ ಅತೀ ಹೆಚ್ಚು ಮತಗಳ ಅಂತರದಿAದ ಗೆಲ್ಲಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು. ಈ ಬಾರಿ ಬಿಜೆಪಿ ಅಭಿವೃದ್ಧಿ ಹಾಗೂ ಹಿಂದುತ್ವದ ಆಧಾರದ ಮೇಲೆ ಚುನಾವಣೆ ಎದುರಸಲಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೈತ ಮೋರ್ಚಾ ಜಿಲ್ಲಾಧ್ಯಕ್ಷ ನಾಗೇಶ್ ಕುಂದಲ್ಪಾಡಿ ಮಾತನಾಡಿ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಬಿಜೆಪಿಯಿಂದ ಮಾತ್ರ ಸಾಧ್ಯವಾಗಿದ್ದು, ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸಬೇಕು. ಬಿಜೆಪಿಯಿಂದ ಭರವಸೆಯ ಭಾರತ ನಿರ್ಮಾಣವಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರೈತ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಯಮುನಾ ಚಂಗಪ್ಪ, ರೈತರ ಏಳಿಗೆಯಾದರೆ ಮಾತ್ರ ದೇಶದ ಏಳಿಗೆ ಎಂಬ ಪ್ರಧಾನಿ ಮೋದಿಯವರ ಆಶಯದಂತೆ ರೈತ ಮೋರ್ಚಾ ಕೆಲಸ ಮಾಡುತ್ತಿದೆ ಎಂದರು.
ವೇದಿಕೆಯಲ್ಲಿ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ತೀರ್ಥರಾಮ್, ಬಿಜೆಪಿಯ ವಿವಿಧ ಮಂಡಲಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು ಮತ್ತಿತತರು ಉಪಸ್ಥಿತರಿದ್ದರು. ರೈತ ಮೋರ್ಚಾ ಸಾಮಾಜಿಕ ಜಾಲತಾಣದ ಶ್ರೀಕಾಂತ್ ನಿರೂಪಿಸಿ, ಕವಿತ ಬೆಳ್ಯಪ್ಪ ತಂಡ ರೈತ ಗೀತೆ ಹಾಡಿತು. ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕುಂದಳ್ಳಿ ದಿನೇಶ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಕಬೀರ್ದಾಸ್ ವಂದಿಸಿದರು.