ಬೆಂಗಳೂರು, ಮಾ. ೨೮: ಪ್ಯಾನ್ ಜೊತೆಗೆ ಆಧಾರ್ ಕಾರ್ಡ್ ಜೋಡಣೆಗೆ ಜೂನ್ ೩೦ ರವರೆಗೆ ಅವಧಿ ವಿಸ್ತರಿಸಿ ಹಣಕಾಸು ಸಚಿವಾಲಯ ಆದೇಶ ಹೊರಡಿಸಿದೆ.
ಪ್ಯಾನ್ ಜೊತೆಗೆ ಆಧಾರ್ ಲಿಂಕ್ಗೆ ಮಾ.೩೧ ಕೊನೆ ದಿನವಾಗಿತ್ತು. ಈ ಅವಧಿಯನ್ನು ವಿಸ್ತರಿಸಲಾಗಿದೆ. ೨೦೨೩ರ ಜೂನ್ ೩೦ ರವರೆಗೆ ಅವಧಿ ವಿಸ್ತರಿಸಲಾಗಿದೆ ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಒಬ್ಬ ವ್ಯಕ್ತಿ ಒಂದಕ್ಕಿAತ ಹೆಚ್ಚು ಪ್ಯಾನ್ ಕಾರ್ಡ್ ಹೊಂದಿರುವುದನ್ನು ತಪ್ಪಿಸುವ ಉದ್ದೇಶದಿಂದ ಆಧಾರ್ ಜೊತೆಗೆ ಪ್ಯಾನ್ ಲಿಂಕ್ ಮಾಡಿಸಬೇಕು ಎಂದು ಆದೇಶ ಹೊರಡಿಸಲಾಗಿತ್ತು. ಲಿಂಕ್ ಮಾಡಿಸಲು ಮಾ.೩೧ ಕೊನೆ ದಿನವಾಗಿತ್ತು. ಇದಕ್ಕೆ ಜನಾಕ್ರೋಶ ವ್ಯಕ್ತವಾದ ಬೆನ್ನಲ್ಲೇ ಗಡುವು ಮೂರು ತಿಂಗಳವರೆಗೆ ವಿಸ್ತರಣೆ ಮಾಡಲಾಗಿದೆ.
ಪ್ಯಾನ್ ಜೊತೆಗೆ ಆಧಾರ್ ಜೋಡಿಸುವ ವ್ಯವಸ್ಥೆಯನ್ನು ೨೦೧೭ರ ಏಪ್ರಿಲ್ನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು. ಆಗ ಪ್ಯಾನ್-ಆಧಾರ್ ಜೋಡಣೆಗೆ ಸರ್ಕಾರ ಯಾವುದೇ ಶುಲ್ಕ ವಿಧಿಸಿರಲಿಲ್ಲ. ಆದರೆ ನಿರೀಕ್ಷಿತ ಮಟ್ಟದಲ್ಲಿ ಆಧಾರ್-ಪ್ಯಾನ್ ಲಿಂಕ್ ಕಾರ್ಯಗತವಾಗಲಿಲ್ಲ. ಹೀಗಾಗಿ ಲಿಂಕ್ಗೆ ಹಲವು ಬಾರಿ ದಿನಾಂಕ ವಿಸ್ತರಣೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು.
ಕೊನೆಯ ಹಂತ ಎಂದು ಹೇಳಿ ೨೦೨೩ರ ಮಾರ್ಚ್ ೩೧ಕ್ಕೆ ಕೊನೆ ದಿನ ಎಂದು ಗಡುವು ವಿಧಿಸಿತ್ತು. ಪ್ಯಾನ್ ಅನ್ನು ಆಧಾರ್ ಜೊತೆಗೆ ಜೋಡಣೆಗೆ ೧,೦೦೦ ಶುಲ್ಕ ವಿಧಿಸಲಾಗಿತ್ತು. ಇದರ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿತ್ತು. ಅಲ್ಲದೇ ದಿನಾಂಕ ವಿಸ್ತರಣೆಗೆ ಕೂಗು ಕೇಳಿಬಂದಿತ್ತು.