ಕರಿಕೆ, ಮಾ. ೨೯: ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ಕರಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಾ. ೨೭ ರಂದು ವಿವಿಧ ಕಾಮಗಾರಿಗಳನ್ನು ಉದ್ಘಾಟನೆ ಮಾಡಿದರು. ಭಾಗಮಂಡಲ- ಕರಿಕೆ ರಸ್ತೆಯ ಹಳೆಮನೆ ಎಂಬಲ್ಲಿ ಒಂದು ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿದ ಡಾಂಬರು ರಸ್ತೆ, ಗ್ರಾಮ ಪಂಚಾಯಿತಿಯ ಕಸ ತ್ಯಾಜ್ಯ ವಿಲೇವಾರಿ ಘಟಕ, ಪಂಚಾಯಿತಿ ಆವರಣ, ಡಿಜಿಟಲ್ ಗ್ರಂಥಾಲಯ ಸೇರಿದಂತೆ ವಿವಿಧ ನೂತನ ಕಾಮಗಾರಿಗಳನ್ನು ಉದ್ಘಾಟಿಸಿದರು.
ನಂತರ ಗ್ರಾ.ಪಂ. ಆವರಣದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೋದಿಜಿಯ ಕನಸಿನಂತೆ ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿ ಡಿಜಿಟಲ್ ಗ್ರಂಥಾಲಯ ಇರಬೇಕು. ಇದರಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಜನರು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲ ಆಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕುದುಪಜೆ ಕಲ್ಪನಾ ಜಗದೀಶ್ ಅವರು ಗಡಿ ಭಾಗವಾದ ಕರಿಕೆಯಲ್ಲಿ ಕೂಲಿ ಕಾರ್ಮಿಕರೇ ಅಧಿಕವಾಗಿದ್ದು, ಹಂತ ಹಂತವಾಗಿ ಗ್ರಾಮದ ಜನತೆಯ ಆಶೋತ್ತರಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದೆಂದರು.
ಕಾರ್ಯಕ್ರಮದಲ್ಲಿ ಪಂಚಾಯಿತಿ ಸದಸ್ಯರಾದ ಕೆ.ಎ. ನಾರಾಯಣ, ಪುರುಷೋತ್ತಮ ಸೇರಿದಂತೆ ಇತರೆ ಸದಸ್ಯರು, ಭಾಗಮಂಡಲ ಗ್ರಾ.ಪಂ. ಉಪಾಧ್ಯಕ್ಷ ಹೊಸೂರು ಸತೀಶ್ ಕುಮಾರ್, ಗ್ರಾ.ಪಂ. ಮಾಜಿ ಅಧ್ಯಕ್ಷರುಗಳಾದ ಹೊಸಮನೆ ಹರೀಶ್, ಚಂಗಪ್ಪ, ಪೊನ್ನಪ್ಪ, ಸೇರಿದಂತೆ ಇತರೆ ಪ್ರಮುಖರು ಪಂಚಾಯಿತಿ ಸಿಬ್ಬಂದಿ ಗಳು, ಗ್ರಾಮಸ್ಥರು ಹಾಜರಿದ್ದರು. ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭಗೊAಡ ಕಾರ್ಯಕ್ರಮಕ್ಕೆ ಪಂಚಾಯಿತಿ ಉಪಾಧ್ಯಕ್ಷ ಬಾಲಚಂದ್ರ ನಾಯರ್ ಸ್ವಾಗತಿಸಿ, ಅಭಿವೃದ್ಧಿ ಅಧಿಕಾರಿ ಗಣಪತಿ ಕಾರ್ಯಕ್ರಮ ನಿರೂಪಿಸಿದರು.