ಶನಿವಾರಸಂತೆ, ಮಾ. ೨೮: ಸಮೀಪದ ಶ್ರೀ ತಪೋವನ ಕ್ಷೇತ್ರ ಮನೆಹಳ್ಳಿ ಮಠದಲ್ಲಿ ಶ್ರೀಗುರುಸಿದ್ಧವೀರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಕಾರ್ಯಕ್ರಮ ಏ. ೬ ರಿಂದ ೮ ವರೆಗೆ ಜರುಗಲಿದೆ.
ಏ. ೬ ರಂದು ಬೆಳಿಗ್ಗೆ ೮ ಗಂಟೆಗೆ ಧ್ವಜಾರೋಹಣ, ಸಂಜೆ ೬.೩೦ಕ್ಕೆ ಸ್ವಾಮಿಯವರಿಗೆ ಕಂಕಣ ಧಾರಣೆ, ಮಹಾ ಮಂಗಳಾರತಿ ನಡೆಯಲಿದೆ. ಏ. ೭ ರಂದು ಬೆಳಿಗ್ಗೆ ೮ ಗಂಟೆಗೆ ಶ್ರೀಮದನಾದಿ ಅನಘ ನಿರಂಜನ ಜಂಗಮ ಪೂಜೆ, ಸಂಜೆ ೬.೩೦ ರಿಂದ ಸ್ವಾಮಿಯವರ “ಸೂರ್ಯ ಮಂಡಲೋತ್ಸವ’ ನಂತರ ದಾಸೋಹವಿದೆ.
ಏ. ೮ ರಂದು ಬೆಳಿಗ್ಗೆ ೫ ಗಂಟೆಯಿAದ ಶ್ರೀಕ್ಷೇತ್ರನಾಥ ವೀರಭದ್ರೇಶ್ವರ ಸ್ವಾಮಿಯವರ ಪ್ರೀತ್ಯರ್ಥ ದುಗ್ಗಳ ಹಾಗೂ ಅಗ್ನಿ ಕೆಂಡೋತ್ಸವ ಸೇವೆ, ಚಂದ್ರ ಮಂಡಲೋತ್ಸವ, ಅಡ್ಡಪಲ್ಲಕ್ಕಿ ಉತ್ಸವ, ಮುತ್ತೈದೆ ಸೇವೆ, ಸುಮಂಗಲಿಯರಿಗೆ ಮಡಿಲು ತುಂಬುವ ಕಾರ್ಯಕ್ರಮ ನಂತರ ದಾಸೋಹ ಸೇವೆ ನಡೆಯಲಿದೆ.
ಮಧ್ಯಾಹ್ನ ೧ ಗಂಟೆಗೆ ಶ್ರೀಸ್ವಾಮಿಯವರ ದೊಡ್ಡ ಚಂದ್ರ ಮಂಡಲೋತ್ಸವ, ಸಂಜೆ ೫.೩೦ಕ್ಕೆ ಪ್ರಾಕಾರ ಪಲ್ಲಕ್ಕಿ ಉತ್ಸವ, ಮಹಾ ರಥೋತ್ಸವ ಹಾಗೂ ರಾತ್ರಿ ೮ ಗಂಟೆಗೆ ಶ್ರೀವೃಷಭಲಿಂಗೇಶ್ವರ ಸ್ವಾಮಿಯವರ ಸನ್ನಿಧಾನದಲ್ಲಿ ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗವಿದೆ ಎಂದು ಶ್ರೀ ತಪೋವನ ಕ್ಷೇತ್ರ ಅಭಿವೃದ್ಧಿ ಸೇವಾ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.