ಸೋಮವಾರಪೇಟೆ, ಮಾ. ೨೭: ಸಮೀಪದ ಕೋವರ್‌ಕೊಲ್ಲಿ ಟಾಟಾ ಕಾಫಿ ಸಂಸ್ಥೆಯಲ್ಲಿರುವ ಶ್ರೀ ವನದುರ್ಗಾದೇವಿ ದೇವಾಲಯದ ೪೯ನೇ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ಕಾರ್ಯಕ್ರಮದ ಪ್ರಯುಕ್ತ ಗಣಪತಿ ಹೋಮ, ಪೂರ್ಣಾಹುತಿ, ದುರ್ಗಾಹೋಮ ನಂತರ ಪೂರ್ಣಾಹುತಿ ಪೂಜಾ ಕೈಂಕರ್ಯಗಳು ರಾಘವೇಂಧ್ರ ಭಟ್ ನೇತೃತ್ವದಲ್ಲಿ ನಡೆಯಿತು. ಮಹಾಪೂಜೆ ನಂತರ ಅನ್ನ ಸಂತರ್ಪಣೆ ನೆರವೇರಿತು. ಸಂಜೆ ದೇವಿಯ ಉತ್ಸವ ಮೂರ್ತಿಯನ್ನು ಊರಿನ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭ ದೇವಾಲಯದ ಅರ್ಚಕ ಬಾಲು ಭಟ್ ಮತ್ತು ಸಂಸ್ಥೆಯ ಪ್ರಮುಖರು ಪಾಲ್ಗೊಂಡಿದ್ದರು. ಪೂಜಾ ಕಾರ್ಯಕ್ರಮದ ಪ್ರಯುಕ್ತ ಕಾರ್ಮಿಕರಿಗೆ ರಂಗೋಲಿ, ರಸ್ತೆ ಓಟ ಸೇರಿದಂತೆ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ನಡೆಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು.