ಕೋವರ್‌ಕೊಲ್ಲಿ ಇಂದ್ರೇಶ್

ನವದೆಹಲಿ, ಮಾ. ೨೭: ದೇಶದಲ್ಲಿ ಅಗ್ಗದ ಮೊಬೈಲ್ ಕರೆ ಮತ್ತು ಡೇಟಾ ಹಾಗೂ ಮನೆ ಮನೆಗೆ ಫೈಬರ್ ಬ್ರಾಡ್ ಬ್ಯಾಂಡ್‌ನಲ್ಲಿ ದರ ಸಮರದ ಮೂಲಕ ದೇಶದ ಇತರ ಕಂಪೆನಿಗಳನ್ನು ಹಿಂದಿಕ್ಕಿ ಮಾರುಕಟ್ಟೆಯಲ್ಲಿ ಅಲ್ಪಾವಧಿಯಲ್ಲೇ ಗಣನೀಯ ಪಾಲು ಪಡೆದಿರುವ ಮುಖೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಕಂಪೆನಿ ಇದೀಗ ದೇಶದ ಲಘು ಪಾನೀಯ ಮಾರುಕಟ್ಟೆಗೂ ಲಗ್ಗೆ ಇಟ್ಟು ಸಂಚಲನ ಸೃಷ್ಟಿಸಿದೆ.

ದೇಶದಲ್ಲಿ ಇಂದು ಅತ್ಯಂತ ಹೆಚ್ಚಾಗಿ ಮಾರಾಟವಾಗುತ್ತಿರುವ ವಸ್ತು ಎಂದರೆ ಕುಡಿಯುವ ನೀರು ಆಗಿದೆ. ಇದರ ಜತೆಯಲ್ಲೇ ಲಘು ಪಾನೀಯಗಳೂ ಇವೆ. ಕೆಲತಿಂಗಳ ಹಿಂದಷ್ಟೇ ದೇಶದಲ್ಲಿ ಮೊದಲು ಬಳಕೆಯಲ್ಲಿದ್ದ ಲಘು ಪಾನೀಯ ಕಂಪೆನಿ ಕ್ಯಾಂಪ ಕೋಲವನ್ನು ಖರೀದಿಸಿದ ರಿಲಯನ್ಸ್ ಇದೀಗ ಲಘು ಪಾನೀಯ ರಂಗಕ್ಕೂ ಲಗ್ಗೆ ಇಟ್ಟಿದ್ದು ಐದು ಸುವಾಸನೆಗಳಲ್ಲಿ ತನ್ನ ಪಾನೀಯವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಆದರೆ ಮಾರುಕಟ್ಟೆಯಲ್ಲಿ ಮೂಂಚೂಣಿಯಲ್ಲಿರುವ ಲಘು ಪಾನೀಯ ತಯಾರಿಕಾ ಕಂಪೆನಿಗಳಾದ ಪೆಪ್ಸಿ ಮತ್ತು ಕೋಕ ಕೋಲ ಇಂದು ಲಘು ಪಾನೀಯ ಮಾರುಕಟ್ಟೆಯಲ್ಲಿ ಶೇ. ೯೦ ರಷ್ಟು ಪಾಲನ್ನು ಹೊಂದಿವೆ. ಈ ಮಾರುಕಟ್ಟೆಯಲ್ಲಿ ತನ್ನ ದರ ಸಮರದ ತಂತ್ರದ ಮೂಲಕ ಪಾಲನ್ನು ಗಿಟ್ಟಿಸಲು ರಿಲಯನ್ಸ್ ಯತ್ನಿಸುತ್ತಿರುವ ಬೆನ್ನಲ್ಲೇ ಕೋಕ ಕೋಲ ಕಂಪೆನಿ ತನ್ನ ೨೦೦ ಎಂಎಲ್ ಕೋಲ ದರವನ್ನು ೨೦ ರೂಪಾಯಿನಿಂದ ೧೫ ರೂಪಾಯಿಗಳಿಗೆ ಇಳಿಕೆ ಮಾಡಿದೆ ಎಂದು ವರದಿ ಆಗಿದೆ. ಕೆಲವು ರಾಜ್ಯಗಳಲ್ಲಿ ತನ್ನ ಸ್ಟಾಕ್ ತೀರುವಳಿಗಾಗಿ ಈ ರೀತಿ ೫ ರೂಪಾಯಿಯ ದರ ಕಡಿತ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ ಕಂಪೆನಿ ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಕ್ಯಾಂಪಾ ಕೋಲವನ್ನು (ಕೋಲ, ಕಿತ್ತಳೆ ಮತ್ತು ಲಿಂಬೆ ಸ್ವಾದ) ಮಾರಾಟ ಮಾಡಲು ಆರಂಭಿಸಿದ ಬೆನ್ನಲ್ಲೇ ಈ ದರ ಕಡಿತ ಮಾಡಲಾಗಿದೆ ಎಂಬುದು ಗಮನಾರ್ಹ. ತನ್ನ ಉತ್ಪನ್ನಗಳನ್ನು ದೇಶಾದ್ಯಂತ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಕಂಪೆನಿ ಹೇಳಿದೆ.

ಆದರೆ ಎಂದಿನAತೆ ತನ್ನ ದರಗಳನ್ನು ಇತರ ಕಂಪೆನಿಗಳಿಗಿAತ ಕಡಿಮೆ ನಿಗದಿಪಡಿಸಲಿದೆ ಎಂದು ಕಂಪೆನಿ ಮೂಲಗಳು ತಿಳಿಸಿವೆ. ಇದರಿಂದಾಗಿ ದರ ಸಮರ ಲಘು ಪಾನೀಯ ಉತ್ಪನ್ನಗಳಿಗೂ ಕಾಲಿರಿಸಲಿದ್ದು ಈ ಬೇಸಗೆಯಲ್ಲಿ ದರ ಕಡಿಮೆ ಆಗಬಹುದೆಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಈಗಲೇ ಲಘು ಪಾನೀಯ ದರಗಳು ಹಾಲಿಗಿಂತಲೂ ಅಧಿಕ ಬೆಲೆಗೆ ಮಾರಾಟವಾಗುತಿದ್ದು ಪಾನೀಯ ದರಕ್ಕಿಂತಲೂ ಈ ಪಾನೀಯಗಳ ಪ್ಯಾಕಿಂಗ್ ಮತ್ತು ಸಾಗಾಟ ವೆಚ್ಚವೇ ಅಧಿಕ ಅಗಿರುವುದುರಿಂದ ಈ ದುಬಾರಿ ದರ ವಿಧಿಸಲಾಗುತ್ತಿದೆ. ಇದರಲ್ಲಿ ತಯಾರಿಕಾ ಕಂಪೆನಿಗಳಿಗೆ ಕೋಟಿಗಟ್ಟಲೆ ರೂಪಾಯಿ ಲಾಭ ಆಗುತ್ತಿರುವುದು ಸುಳ್ಳಲ್ಲ.

ರಿಲಯನ್ಸ್ ಪ್ರವೇಶದಿಂದಾಗಿ ಮುಂದಿನ ದಿನಗಳಲ್ಲಿ ಲಘು ಪಾನೀಯಗಳ ರಿಟೇಲ್ ದರದಲ್ಲಿ ದರ ಸಮರದಿಂದಾಗಿ ಗಣನೀಯ ಕುಸಿತ ಉಂಟಾಗಲಿದೆ. ಇದರಿಂದ ಗ್ರಾಹಕರಿಗೆ ಅನುಕೂಲ ಆಗಲಿದೆ ಎಂದು ಹೇಳಲಾಗಿದೆ.