ಮಡಿಕೇರಿ, ಮಾ. ೨೭: ರಂಗಭೂಮಿಯು ಮನುಷ್ಯನನ್ನು ವಿನಯವಂತನನ್ನಾಗಿ ಮಾಡುತ್ತದೆ ಎಂದು ರಂಗಭೂಮಿ ಕಲಾವಿದ, ಕರ್ನಾಟಕ ಜಾನಪದ ಪರಿಷತ್‌ನ ಬೆಂಗಳೂರು ನಗರ ಅಧ್ಯಕ್ಷ ಟಿ. ತಿಮ್ಮೇಶ್ ಹೇಳಿದರು.

ಅಲ್ಲಾರಂಡ ರಂಗ ಚಾವಡಿ ವತಿಯಿಂದ ನಗರದ ಭಾರತೀಯ ವಿದ್ಯಾಭವನದಲ್ಲಿ ನಡೆದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮವನ್ನು ರಂಗಗೀತೆ ಹಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ರಂಗಭೂಮಿ ಮಾತ್ರವಲ್ಲದೆ, ಇತರ ಕಲಾ ಪ್ರಾಕಾರಗಳಲ್ಲಿ ತೊಡಗಿಸಿಕೊಂಡ ಕಲಾವಿದರಿಗೆ ಸಮಾಜದಲ್ಲಿ ಮನ್ನಣೆ ಸಿಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಕಲಾವಿದ ಕೂಡ ತನ್ನ ಸಾಮಾಜಿಕ ಹೊಣೆಗಾರಿಕೆಯನ್ನು ಅರಿಯಬೇಕು. ಸಮಾಜಕ್ಕೆ ಕೊಡುಗೆಗಳನ್ನು ನೀಡುವಂತಾಗಬೇಕು ಎಂದು ತಿಮ್ಮೇಶ್ ನುಡಿದರು. ಮಕ್ಕಳನ್ನು ರಂಗಭೂಮಿಯತ್ತ ಸೆಳೆಯುವ ಕೆಲಸವಾಗಬೇಕು ಎಂದು ಹೇಳಿದ ತಿಮ್ಮೇಶ್ ಇದರಿಂದ ಮಕ್ಕಳಲ್ಲಿ ಸಂಸ್ಕಾರ ಬೆಳೆಯುತ್ತದೆ ಎಂದು ತಿಳಿಸಿದರು. ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯೆ ರಾಧ ಕೊಡಗು ಮಾತನಾಡಿ, ಪ್ರತಿಯೊಂದು ಮನೆಗಳಲ್ಲೂ ಒಂದಲ್ಲ ಒಂದು ಪ್ರತಿಭೆಗಳು ಇರುತ್ತವೆ. ಅವುಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದು ಹೇಳಿದರು. ರಂಗಗೀತೆ ಹಾಡುವ ಮೂಲಕ ರಂಗಭೂಮಿ ನಡೆದುಬಂದ ಹಾದಿಯನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ರಂಗ ಕಲಾವಿದೆ ಉಳ್ಳಿಯಡ ಡಾಟಿ ಪೂವಯ್ಯ, ರಂಗ ಕಲಾವಿದ ಪಟ್ಟಡ ಧನು, ರಂಗಕರ್ಮಿ ಬಾಲಾಜಿ ಕಶ್ಯಪ್ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಕ್ಷö್ಯಚಿತ್ರ ನಿರ್ದೇಶಕ ಸಿರಿಗಂಧ ಶ್ರೀನಿವಾಸ್ ಮಾತನಾಡಿ, ಅಪ್ಪನೆರವಂಡ ಅಪ್ಪಚ್ಚಕವಿ ಅವರು ಕಠಿಣ ಸಾಮಾಜಿಕ ಸವಾಲು ಗಳ ನಡುವೆಯೂ ಕೊಡಗಿನಲ್ಲಿ ರಂಗ ಚಟುವಟಿಕೆಗೆ ಗಟ್ಟಿ ಅಡಿಪಾಯ ಹಾಕಿದವರು ರಂಗಾಸಕ್ತರನ್ನು ಒಟ್ಟುಗೂಡಿಸಿ ಕೊಡಗಿನಲ್ಲಿ ರಂಗ ಚಟುವಟಿಕೆಯನ್ನು ಹೆಚ್ಚಿಸುವ ಕಾರ್ಯ ನಡೆಯಬೇಕು. ರಂಗ ಚಟುವಟಿಕೆ ಯಿಂದ ಸಮಾಜದ ಬದಲಾವಣೆ ಸಾಧ್ಯವಿದ್ದು, ರಂಗಭೂಮಿಯನ್ನು ಪ್ರಬಲಗೊಳಿಸುವತ್ತ ಎಲ್ಲರೂ ಶ್ರಮಿಸಬೇಕೆಂದರು. ಅಲ್ಲಾರಂಡ ರಂಗ ಚಾವಡಿ ಅಧ್ಯಕ್ಷ ಅಲ್ಲಾರಂಡ ವಿಠಲ ನಂಜಪ್ಪ ಕಾರ್ಯಕ್ರಮ ನಿರ್ವಹಿಸಿ ದರು. ಬಳಿಕ ಮಾದೇಟಿ ಬೆಳ್ಯಪ್ಪ ರಚಿಸಿ ನಿರ್ದೇಶಿಸಿರುವ ಕಣಿವೆಯ ನೆಳಲಲ್ಲಿ ನಾಟಕ ಪ್ರದರ್ಶನ ನಡೆಯಿತು.