ಸೋಮವಾರಪೇಟೆ, ಮಾ. ೨೮: ಮನೆಗೆ ರಸ್ತೆ ಸಂಪರ್ಕವಿಲ್ಲದ್ದರಿAದ ಪಾರ್ಶ್ವವಾಯುವಿಗೆ ಒಳಗಾದ ವೃದ್ಧೆಯೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ತಾಲೂಕಿನ ಗರ್ವಾಲೆ ಗ್ರಾ.ಪಂ. ವ್ಯಾಪ್ತಿಯ ಮಂಕ್ಯ ಗ್ರಾಮದಲ್ಲಿ ನಡೆದಿದೆ.

ಗರ್ವಾಲೆ ಗ್ರಾ.ಪಂ. ವ್ಯಾಪ್ತಿಯ ಮಂಕ್ಯ ಗ್ರಾಮದ ಚಾಮೇರಮನೆ ನಿವಾಸಿ ಕೆ. ಮಂದಣ್ಣ ಅವರ ಪತ್ನಿ ಚಾಮೇರ ಬೋಜಮ್ಮ (೭೩) ಅವರು ಕಳೆದ ತಾ. ೧೮ರಂದು ಪಾರ್ಶ್ವವಾಯುವಿಗೆ ಒಳಗಾಗಿದ್ದರು.

ಮನೆಯಲ್ಲಿ ಓಡಾಡಿಕೊಂಡಿದ್ದ ಸಂದರ್ಭವೇ ದಿಢೀರಾಗಿ ಆಘಾತಕ್ಕೆ ಒಳಗಾಗಿ ಕುಸಿದು ಬಿದ್ದ ಅವರನ್ನು ಮನೆ ಮಂದಿ ಹಾಗೂ ಸ್ಥಳೀಯರು ಆಸ್ಪತ್ರೆಗೆ ಸಾಗಿಸಲು ಮುಂದಾದರಾದರೂ ರಸ್ತೆಯ ಕೊರತೆ ಅಡ್ಡಲಾಗಿತ್ತು!

ಮಧ್ಯಾಹ್ನ ೧೨.೩೦ರ ಸುಮಾರಿಗೆ ಆಘಾತಕ್ಕೊಳಗಾದ ಬೋಜಮ್ಮ ಅವರನ್ನು ಮುಖ್ಯರಸ್ತೆಗೆ ಹೊತ್ತುಕೊಂಡು ಬರುವಷ್ಟರಲ್ಲಿ ಸಂಜೆ ೪ ಗಂಟೆಯಾಗಿತ್ತು. ಅಲ್ಲಿಂದ ವಾಹನದ ಮೂಲಕ ಮಡಿಕೇರಿ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದೊಯ್ಯುವಂತೆ ಶಿಫಾರಸ್ಸು ಮಾಡಿದ್ದರು.

ಅದರಂತೆ ಮೈಸೂರಿನ ನಾರಾಯಣ ಹೃದಯಾಲಯಕ್ಕೆ ರಾತ್ರಿ ೧.೩೦ರ ಸುಮಾರಿಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಚಿಕಿತ್ಸೆಗೆ ಒಳಗಾದರೂ ಫಲಕಾರಿಯಾಗದೇ ನಿನ್ನೆ ರಾತ್ರಿ ೧.೩೦ರ ಸುಮಾರಿಗೆ ಸಾವನ್ನಪ್ಪಿದ್ದಾರೆ.

ಪಾರ್ಶ್ವವಾಯು ಆದ ತಕ್ಷಣ ೩ ರಿಂದ ೪ ಗಂಟೆಯ ಒಳಗೆ ಚಿಕಿತ್ಸೆ ಪ್ರಾರಂಭಿಸಿದ್ದರೆ ಬದುಕುವ ಸಾಧ್ಯತೆಯಿತ್ತು. ಆದರೆ ರಸ್ತೆಯ ಅವ್ಯವ್ಯಸ್ಥೆಯಿಂದಾಗಿ ಆಸ್ಪತ್ರೆಗೆ ಹೋಗುವಷ್ಟರಲ್ಲಿಯೇ ತಡವಾಗಿತ್ತು. ಹೀಗಾಗಿ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನಮ್ಮ ಊರಿನ ರಸ್ತೆ ಸಮಸ್ಯೆ ಬಗ್ಗೆ ಅನೇಕ ದಶಕಗಳಿಂದ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ರಸ್ತೆಯ ಅವ್ಯವಸ್ಥೆಯಿಂದಾಗಿ ನಮ್ಮ ತಾಯಿಯನ್ನು ಕಳೆದುಕೊಳ್ಳುವಂತಾಗಿದೆ ಎಂದು ಪುತ್ರ ಚಾಮೇರ ಉದಯ ಮಂದಣ್ಣ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಂಕ್ಯ ಗ್ರಾಮದ ಹೊಳೆಯಿಂದ ಆಚೆ ಬದಿಯಿರುವ ಸುಮಾರು ೮ ಮನೆಗಳಿಗೆ ತೆರಳಲು ರಸ್ತೆ ಸಂಪರ್ಕವೇ ಇಲ್ಲ. ಹೊಳೆಗೆ ಸಣ್ಣ ಸೇತುವೆ ನಿರ್ಮಾಣ ಮಾಡಿದ್ದರೂ ರಸ್ತೆಯ ಸಂಪರ್ಕ ನೀಡಿಲ್ಲ. ಈ ಬಗ್ಗೆ ಕಳೆದ ಅನೇಕ ವರ್ಷಗಳಿಂದ ಮನವಿ ಮಾಡುತ್ತಾ ಬಂದಿದ್ದರೂ ಯಾರೂ ಸ್ಪಂದಿಸುತ್ತಿಲ್ಲ ಎಂದು ಚಾಮೇರ ಸಂತೋಷ್ ಅವರು ಪತ್ರಿಕೆಯೊಂದಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಕ್ಷಣ ಸ್ಥಳೀಯ ಆಡಳಿತದಿಂದ ಹಿಡಿದು ಅಧಿಕಾರಿ ವರ್ಗದವರು ಈ ಬಗ್ಗೆ ಗಮನ ಹರಿಸಿ ರಸ್ತೆ ಸಂಪರ್ಕವನ್ನು ಸುಗಮಗೊಳಿಸಬೇಕು. ಹೊಳೆಯ ಆ ಬದಿಯಲ್ಲಿರುವ ಮಂದಿಯೂ ಸಹ ಈ ದೇಶದ ಪ್ರಜೆಗಳೇ ಎಂಬುದನ್ನು ಅರಿತು ಸೌಕರ್ಯ ಒದಗಿಸಬೇಕೆಂದು ಸಂತೋಷ್ ಆಗ್ರಹಿಸಿದ್ದಾರೆ. -ವಿಜಯ್