ಸೋಮವಾರಪೇಟೆ, ಮಾ.೨೭ : ಇಲ್ಲಿನ ಶ್ರೀ ಆಂಜನೇಯ ದೇವಾಲಯ ಸಮಿತಿ ವತಿಯಿಂದ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ರಾಮನವಮಿ ಉತ್ಸವ ತಾ. ೩೦ರಂದು ನಡೆಯಲಿದೆ ಎಂದು ಉತ್ಸವ ಸಮಿತಿ ಅಧ್ಯಕ್ಷ ಸುಭಾಶ್ ತಿಮ್ಮಯ್ಯ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕಳೆದ ಒಂದು ವಾರದಿಂದ ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ೬ರಿಂದ ೮ ಗಂಟೆಯವರೆಗೆ ದೇವಾಲಯದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳೊಂದಿಗೆ ಪ್ರತಿನಿತ್ಯ ದೇವರಿಗೆ ವಿವಿಧ ಅಲಂಕಾರಗಳು ನಡೆಯುತ್ತಿವೆ ಎಂದರು.

ತಾ. ೩೦ ರಂದು ಸಂಜೆ ೫ ಗಂಟೆಗೆ ಹಿಂದೂ ಜಾಗರಣಾ ವೇದಿಕೆಯ ಸಹಯೋಗದೊಂದಿಗೆ ಶ್ರೀ ರಾಮನ ವಿಗ್ರಹವನ್ನು ಅಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಿ ತಾಲೂಕಿನ ವಿವಿಧ ಭಾಗಗಳಿಂದ ಬರುವ ವಿದ್ಯುತ್ ಅಲಂಕೃತ ಮಂಟಪಗಳೊAದಿಗೆ ಹಾಗೂ ಸ್ತಬ್ಧ ಚಿತ್ರಗಳೊಂದಿಗೆ ಪಟ್ಟಣದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮೂಲಕ ತೆರಳಲಾಗುವುದು. ಇದೇ ಸಂದರ್ಭ ವಿವಿಧ ಜಾನಪದ ಕಲಾ ತಂಡಗಳ ಪ್ರದರ್ಶನ ಹಾಗೂ ಪಟಾಕಿ ಸಿಡಿಮದ್ದಿನೊಂದಿಗೆ ಶೋಭಾಯಾತ್ರೆ ನಡೆಯಲಿದೆ. ಸಂಜೆ ಅನ್ನದಾನ ಜರುಗಲಿದೆ ಎಂದು ತಿಳಿಸಿದರು.

೧೯೪೨ ರಿಂದ ಪ್ರಾರಂಭಗೊAಡ ಈ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದು, ೨೦೨೨ರಿಂದ ಅಂದಾಜು ರೂ.೨.೫ ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ಕಾರ್ಯ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಬಹುತೇಕ ಕೆಲಸ ಕಾರ್ಯಗಳು ಪ್ರಗತಿಯಲ್ಲಿದ್ದು, ಇನ್ನೂ ಹೆಚ್ಚಿನ ಹಣದ ಅವಶ್ಯಕತೆ ಇದ್ದು, ದಾನಿಗಳು, ಭಕ್ತಾದಿಗಳು ಆಂಜನೇಯ ದೇವಾಲಯ ಜೀರ್ಣೋದ್ಧಾರ ಸಮಿತಿಯ ಖಾತೆ ಸಂಖ್ಯೆ ೧೩೮೨೦೦೦೧೦೦೦೪೧೩೦೧, ಕರ್ನಾಟಕ ಬ್ಯಾಂಕ್, ಸೋಮವಾರಪೇಟೆ, ಐಎಫ್‌ಎಸ್‌ಸಿ ಕೋಡ್ ಕೆಎಆರ್‌ಬಿ-೦೦೦೦೧೩೮ ಇಲ್ಲಿಗೆ ಧನ ಸಹಾಯ ಮಾಡಬಹುದು ಎಂದು ಗೋಷ್ಠಿಯಲ್ಲಿದ್ದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಸ್.ಎಲ್. ಸೀತಾರಾಮ್ ಹೇಳಿದರು.

ಗೋಷ್ಠಿಯಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಬನ್ನಳ್ಳಿ ಗೋಪಾಲ್, ಉತ್ಸವ ಸಮಿತಿ ಉಪಾಧ್ಯಕ್ಷ ಎಂ.ಬಿ. ಉಮೇಶ್ ಉಪಸ್ಥಿತರಿದ್ದರು.