ಮಡಿಕೇರಿ, ಮಾ. ೨೭: ಬಿಜೆಪಿ ರೈತ ಮೋರ್ಚಾದ ವತಿಯಿಂದ ತಾ. ೨೯ ರಂದು ಮೂರ್ನಾಡಿನಲ್ಲಿ ಸಮಾವೇಶ ನಡೆಯಲಿದೆ ಎಂದು ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಮಾಪಂಗಡ ಯಮುನಾ ಚಂಗಪ್ಪ ಮಾಹಿತಿ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ರಾಜ್ಯ ಹಾಗೂ ಕೇಂದ್ರ ಸರಕಾರ ರೈತಪರವಾಗಿದೆ. ಸದೃಢ ಭಾರತ ನಿರ್ಮಾಣಕ್ಕೆ ಸಶಕ್ತ ಸೇನೆ ಹಾಗೂ ರೈತಾಪಿ ವರ್ಗದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ಹತ್ತುಹಲವು ಕಾರ್ಯಕ್ರಮದ ಮೂಲಕ ರೈತರ ಬಲವರ್ಧನೆಗೆ ಪೂರಕವಾಗಿ ಸ್ಪಂದಿಸುತ್ತಿದೆ. ಈ ವರ್ಷದ ರಾಜ್ಯ ಬಜೆಟ್ನಲ್ಲಿಯೂ ಕೃಷಿ ವಲಯಕ್ಕೆ ಪ್ರಾತಿನಿಧ್ಯ ನೀಡಿರುವುದು ಇದಕ್ಕೆ ಸಾಕ್ಷಿಯಾಗಿದೆ. ರೈತವಿದ್ಯಾನಿಧಿ, ಕಿಸಾನ್ ಸಮ್ಮಾನ್ ಯೋಜನೆಗಳು, ಶೂನ್ಯ ಬಡ್ಡಿದರದ ಸಾಲ ವಿಸ್ತರಣೆ ಕೃಷಿಕರಿಗೆ ಪ್ರಯೋಜನವಾಗಿದೆ. ಮಣ್ಣು ಪರೀಕ್ಷಾ ಕೇಂದ್ರ ಸ್ಥಾಪನೆ ಮೂಲಕ ಇಳುವರಿ ಹಾಗೂ ಆದಾಯ ಹೆಚ್ಚಳಕೆ ಒತ್ತು ನೀಡಲಾಗಿದೆ. ಕೃಷಿ ಮಾರುಕಟ್ಟೆ ವಿಸ್ತರಿಸುವ ನಿಟ್ಟಿನಲ್ಲಿ ತಂತ್ರಜ್ಞಾನ, ವೈಜ್ಞಾನಿಕತೆಯನ್ನು ಅಳವಡಿಸಿಕೊಳ್ಳುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಕೃಷಿ ವಲಯ ಬೆಳವಣಿಗೆ ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಡಿಕೇರಿ ಗ್ರಾಮಾಂತರ ಮಂಡಲ ಅಧ್ಯಕ್ಷ ಶಿವಚಾಳಿಯಂಡ ಜಗದೀಶ್ ಮಾತನಾಡಿ, ತಾ. ೨೯ ರಂದು ಮೂರ್ನಾಡು ಕೊಡವ ಸಮಾಜದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಕಾರ್ಯಕ್ರಮ ನಡೆಯಲಿದ್ದು, ರಾಜ್ಯಸಭಾ ಸದಸ್ಯ, ರೈತಮೋರ್ಚಾದ ರಾಜ್ಯಧ್ಯಕ್ಷ ಈರಣ್ಣ ಕಡಾಡಿ ಅವರು ಪಾಲ್ಗೊಳ್ಳಲಿದ್ದಾರೆ. ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರನ್ನು ಸಂಪರ್ಕಿಸಲಾಗಿದ್ದು, ಅವರು ಕೂಡ ಆಗಮಿಸುವ ಸಾಧ್ಯತೆ ಇದೆ. ಜೊತೆಗೆ ಕೊಡಗಿನ ಶಾಸಕರು, ಪಕ್ಷದ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಸಮಾವೇಶಕ್ಕೆ ಮುನ್ನ ನಗರದ ಮುಖ್ಯಬೀದಿಯಲ್ಲಿ ಮೆರವಣಿಗೆ ನಡೆಯಲಿದೆ ಎಂದು ವಿವರಿಸಿದರು.
ಗೋಷ್ಠಿಯಲ್ಲಿ ಸೋಮವಾರಪೇಟೆ ಮಂಡಲ ರೈತಮೋರ್ಚಾದ ಅಧ್ಯಕ್ಷ ಮಚ್ಚಂಡ ಪ್ರಕಾಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಂದಳ್ಳಿ ದಿನೇಶ್ ಹಾಜರಿದ್ದರು.