ಮಡಿಕೇರಿ, ಮಾ. ೨೮: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಿಜೆಪಿ ಸರ್ಕಾರ ಕೊಡವ ಅಭಿವೃದ್ಧಿ ನಿಗಮ ಸ್ಥಾಪಿಸಿ ಆದೇಶ ಹೊರಡಿಸಿರುವುದು ಕೊಡಗು ವಿಲೀನದ ಏಳು ದಶಕಗಳ ನಂತರ ಕೊಡವರಿಗೆ ಕರ್ನಾಟಕ ಸರ್ಕಾರ ನೀಡಿದ ಅತ್ಯುನ್ನತ ಗೌರವವಾಗಿದೆ ಎಂದು ಯುನೈಟೆಡ್ ಕೊಡವ ಆರ್ಗನೈಸೇಷನ್ ಹೇಳಿದೆ.
ನಗರದ ಪ್ರತಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಯುಕೊ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಮಾತನಾಡಿದರು.
ಯುಕೊ ಸಂಘಟನೆಯು ಕಳೆದ ಎಂಟು ವರ್ಷಗಳಿಂದ ಕೊಡವ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂಬ ಬೇಡಿಕೆಯನ್ನು ೨೦೧೫ರ ‘ಜಬ್ಬೂಮಿ ಬಾಳೋ’ ಪಾದಯಾತ್ರೆಯ ಸಂದರ್ಭದಲ್ಲೇ ಸರ್ಕಾರದ ಮುಂದಿಟ್ಟು ಪರಿಣಾಮಕಾರಿಯಾಗಿ ಹೋರಾಟ ಹಾಗೂ ಕಾರ್ಯ ತಂತ್ರವನ್ನು ರೂಪಿಸುತ್ತಾ ಬಂದಿತ್ತು. ಆದರೆ ಈ ನಿಟ್ಟಿನಲ್ಲಿ ಸಮಯೋಚಿತ ವಾಗಿ ಕಳೆದ ಎರಡು ವರ್ಷಗಳಿಂದ ಹೋರಾಟವನ್ನು ತೀವ್ರಗೊಳಿಸಿ, ಶಾಸಕ ಕೆ.ಜಿ. ಬೋಪಯ್ಯ ಅವರ ನೇತೃತ್ವದಲ್ಲಿ ಶಾಸಕರಾದ ಅಪ್ಪಚ್ಚು ರಂಜನ್ ಹಾಗೂ ಅಂದಿನ ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರನ್ನೊಳ ಗೊಂಡAತೆ ಯುಕೊ ನಿಯೋಗವು ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿ ಚರ್ಚಿಸಿತ್ತು. ಇದಕ್ಕೆ ಸ್ಪಂದಿಸಿದ್ದ ಮುಖ್ಯಮಂತ್ರಿಗಳು ಮುಂದಿನ ಬಜೆಟ್ನಲ್ಲಿಯೇ ನಿಗಮವನ್ನು ಘೋಷಿಸುವ ಭರವಸೆಯನ್ನು ನೀಡಿದರಾದರೂ, ಕಾರಣಾಂತರ ಗಳಿಂದ ಅದು ಘೋಷಣೆ ಯಾಗಿರಲಿಲ್ಲ. ಆದರೂ ನಿರಂತರವಾಗಿ ಶಾಸಕ ಕೆ.ಜಿ. ಬೋಪಯ್ಯ ಅವರ ಮುಖಾಂತರ
(ಮೊದಲ ಪುಟದಿಂದ) ಒತ್ತಡವನ್ನು ಹೇರುತ್ತಲೇ ಬಂದ ಪರಿಣಾಮ ಇಂದು ಕೊಡವ ಅಭಿವೃದ್ಧಿ ನಿಗಮ ಘೋಷಣೆಯಾಗಿದೆ. ಇದು ಯುಕೊ ಹೋರಾಟಕ್ಕೆ ದೊರೆತಿರುವ ಮಹತ್ವದ ಗಲುವಾಗಿದೆ ಎಂದು ನುಡಿದರು.
ಇದುವರೆಗೆ ಅಭಿವೃದ್ಧಿ ನಿಗಮ ಪಡೆದುಕೊಂಡಿರುವ ಸಮುದಾಯಗಳು ಬಹುಸಂಖ್ಯಾತರಿದ್ದು, ರಾಜ್ಯದ ಅಧಿಕಾರ ಚುಕ್ಕಾಣಿಯನ್ನು ಹಿಡಿಯುವಂತಹ ರಾಜಕೀಯವಾಗಿ ಪ್ರಾಬಲ್ಯ ಹೊಂದಿರುವ ಸಮುದಾಯಗಳಾಗಿವೆ. ಉಳಿದಂತೆ ಕನಿಷ್ಟ ಹತ್ತು ಹದಿನೈದು ಶಾಸಕರ ಮೇಲೆ ಹಿಡಿತವಿರುವ ಸಮುದಾಯಗಳಾಗಿವೆ. ಆದರೆ ಯಾವುದೇ ರಾಜಕೀಯ ಲಾಭಿಯಿಲ್ಲದ, ರಾಜಕೀಯವಾಗಿ ಅಲ್ಪಸಂಖ್ಯಾತರಾಗಿರುವ ದುರ್ಬಲ ಕೊಡವ ಸಮುದಾಯವೂ ಇಂದು ನಿಗಮ ಪಡೆದುಕೊಂಡಿರುವುದು ಮಹತ್ವದ ಸಾಧನೆಯಾಗಿದೆ. ಇಂದು ಸರ್ಕಾರ ಕೊಡವ ಅಭಿವೃದ್ಧಿ ನಿಗಮ ಘೋಷಿಸಿರುವುದಕ್ಕೆ ಯುಕೊ ಸಂಘಟನೆಯ ನಡೆ ಹಾಗೂ ಬದ್ಧತೆ, ಶಾಸಕ ಕೆ.ಜಿ. ಬೋಪಯ್ಯ ಅವರ ಇಚ್ಚಾಶಕ್ತಿ ಹೆಚ್ಚಿದ್ದು, ಉಳಿದಂತೆ ಸಂಸದ ಪ್ರತಾಪ್ ಸಿಂಹ, ಶಾಸಕ ಅಪ್ಪಚ್ಚು ರಂಜನ್ ಹಾಗೂ ವೀಣಾ ಅಚ್ಚಯ್ಯ ಹಾಗೂ ಸುಜಾ ಕುಶಾಲಪ್ಪ, ಕೊಡಗು ಬಿಜೆಪಿ ಘಟಕದ ಪಳೆಯಂಡ ರಾಬಿನ್ ದೇವಯ್ಯ ಹಾಗೂ ನೆಲ್ಲಿರ ಚಲನ್ ಕುಮಾರ್, ರಾಜ್ಯ ನಾಯಕರುಗಳಾದ ನಳಿನ್ಕುಮಾರ್ ಕಟೀಲ್, ಸಿ.ಟಿ. ರವಿ ಮುಂತಾದವರ ಸಹಕಾರ ಕಾರಣವಾಗಿದೆ.
ಮುಂದೆ ರಾಜ್ಯದಲ್ಲಿ ಬರಲಿರುವ ನೂತನ ಸರ್ಕಾರವು ಕರ್ನಾಟಕ ರಾಜ್ಯ ಕೊಡವ ಅಭಿವೃದ್ಧಿ ನಿಗಮಕ್ಕೆ ನೂತನ ಅಧ್ಯಕ್ಷರು ಹಾಗೂ ನಿರ್ದೇಶಕರುಗಳನ್ನು ನಾಮನಿರ್ದೇಶನ ಮಾಡುವುದರೊಂದಿಗೆ ಸೂಕ್ತ ಅನುದಾನವನ್ನು ಮೀಸಲಿಡುವುದರ ಮೂಲಕ ನಿಗಮವು ಅಧಿಕೃತವಾಗಿ ಅಸ್ತಿತ್ವಕ್ಕೆ ಬರಲಿದೆ. ಈ ಸಂದರ್ಭದಲ್ಲಿ ಮತ್ತೊಮ್ಮೆ ಸರ್ಕಾರವನ್ನು ಭೇಟಿಯಾಗಿ ಕನಿಷ್ಟ ರೂ. ೨೫೦ ಕೋಟಿ ಅನುದಾನಗಳನ್ನು ಮೀಸಲಿಡುವಂತೆ ಕೋರಲಾಗುವುದು ಎಂದು ಮಂಜು ಚಿಣ್ಣಪ್ಪ ತಿಳಿಸಿದರು.
ಕೊಡವ ಅಭಿವೃದ್ಧಿ ನಿಗಮದ ಮೂಲಕ ಕೊಡವ ಸಮಗ್ರ ಅಭಿವೃದ್ಧಿಗೆ ಅವಕಾಶವಿದೆ. ಕೊಡವರ ಸಾಮಾಜಿಕ, ಸಾಂಸ್ಕೃತಿಕ, ಪಾರಂಪರಿಕ ಹಾಗೂ ಅಧ್ಯಾತ್ಮಿಕ ಅಸ್ತಿತ್ವವನ್ನು ಸದೃಢಗೊಳಿಸಲು ಪೂರಕವಾದ ಯೋಜನೆಗಳನ್ನು ತಯಾರಿಸಿ ಸರ್ಕಾರದ ಮುಂದಿಟ್ಟು, ಅನುದಾನವನ್ನು ಪಡೆದುಕೊಳ್ಳಲು ಅವಕಾಶವಿದೆ. ಹಾಗೆಯೇ ನಿಗಮಕ್ಕೆ ನಿಯೋಜಿತ ಅನುದಾನವನ್ನು ಸದ್ಭಳಕೆ ಮಾಡಲೂ ಸಹ ಸಂಪೂರ್ಣ ಸ್ವಾತಂತ್ರö್ಯವಿರುವುದರಿAದ ಕೊಡವರ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ದೂರದೃಷ್ಠಿ ಇರುವಂತವರು ನಿಗಮಕ್ಕೆ ನಾಮನಿರ್ದೇಶನಗೊಳ್ಳಬೇಕಿದೆ ಎಂಬುವುದು ನಮ್ಮ ಆಶಯವಾಗಿದೆ ಎಂದು ಅವರು ಹೇಳಿದರು.
ಗೋಷ್ಠಿಯಲ್ಲಿ ಯುನೈಟೆಡ್ ಕೊಡವ ಆರ್ಗನೈಸೇಷನ್ ಸದಸ್ಯರಾದ ಚೆಪ್ಪುಡಿರ ಸುಜು ಕರುಂಬಯ್ಯ, ಅಪ್ಪಾರಂಡ ವೇಣು ಪೊನ್ನಪ್ಪ, ಮಾದೇಟಿರ ತಿಮ್ಮಯ್ಯ ಉಪಸ್ಥಿತರಿದ್ದರು.