ಮುಳ್ಳೂರು, ಮಾ. ೨೭: ಊರೂಡುವೆ ಜಾಗದಲ್ಲಿ ೩೦ ಸೆಂಟು ಜಾಗವನ್ನು ಸ್ಮಶಾನಕ್ಕಾಗಿ ಗ್ರಾಮಸ್ಥರು ತೆರವುಗೊಳಿಸಿದ ಘಟನೆ ನಿಡ್ತ ಗ್ರಾಮದಲ್ಲಿ ನಡೆದಿದೆ. ನಿಡ್ತ ಗ್ರಾ.ಪಂ.ಗೆ ಸೇರಿದ ಮುಳ್ಳೂರು ಇಂಟಿ ನಾಯಕನ ಕೆರೆ ಸಮೀಪ ಎಳನೀರುಗುಂಡಿ ಗ್ರಾಮಕ್ಕೆ ತೆರಳುವ ರಸ್ತೆ ಬದಿಯಲ್ಲಿ ಸರ್ವೆ ನಂ ೭೧/೧ ರ ೯ ಎಕರೆ ಊರೂಡುವೆ ಜಾಗವನ್ನು ಹಲವು ವರ್ಷಗಳಿಂದ ಮೂವರು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡು ಕಾಫಿತೋಟ ಮಾಡಿಕೊಂಡಿದ್ದರು.
ಆದರೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಗ್ರಾಮಗಳಲ್ಲಿ ಯಾರಾದರೂ ನಿಧನರಾದಾಗ ಅವರ ಅಂತ್ಯ ಸಂಸ್ಕಾರ ಮಾಡಲು ಎಲ್ಲೂ ಸ್ಮಶಾನಕ್ಕಾಗಿ ಜಾಗ ಇಲ್ಲದೆ ಪರದಾಡುತ್ತಿದ್ದರು. ಕಳೆದ ೩ ವರ್ಷದ ಹಿಂದೆ ಗ್ರಾಮಸ್ಥರು ಗ್ರಾಮದಲ್ಲಿ ಮೂವರು ಒತ್ತುವರಿ ಮಾಡಿಕೊಂಡಿರುವ ಜಾಗ ಊರೂಡುವೆಗೆ ಸೇರಿದೆ ಎಂಬ ಖಚಿತ ಮಾಹಿತಿ ತಿಳಿದು ಒತ್ತುವರಿ ಮಾಡಿಕೊಂಡಿದ್ದ ವ್ಯಕ್ತಿಗಳಿಗೆ ಮತ್ತು ಸಂಬAಧಪಟ್ಟ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸ್ಮಶಾನಕ್ಕಾಗಿ ೯೦ ಸೆಂಟು ಜಾಗವನ್ನು ಬಿಟ್ಟುಕೊಡುವಂತೆ ಮನವಿ ಮಾಡಿದ್ದರು.
ಈ ವಿಚಾರದ ಬಗ್ಗೆ ಕಳೆದ ೩ ವರ್ಷಗಳಿಂದ ವಿವಾದ ನಡೆಯುತ್ತಿತ್ತು. ಗ್ರಾಮಸ್ಥರ ಮನವಿ ಮೇರೆಗೆ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರಿಗೆ ಸ್ಮಶಾನಕ್ಕಾಗಿ ೩೦ ಸೆಂಟು ಜಾಗವನ್ನು ಬಿಟ್ಟುಕೊಡುವಂತೆ ಒತ್ತುವರಿ ಮಾಡಿದ್ದ ವ್ಯಕ್ತಿಗಳಿಗೆ ಸೂಚಿಸಿ ಆ ಜಾಗದಲ್ಲಿ ಸ್ಮಶಾನದ ಜಾಗ ಎಂಬ ಫಲಕವನ್ನು ಅಳವಡಿಸಿದರು. ಆದರೆ ಒತ್ತುವರಿ ಮಾಡಿಕೊಂಡಿದ್ದ ವ್ಯಕ್ತಿಗಳು ೩೦ ಸೆಂಟು ಜಾಗವನ್ನು ತೆರವುಗೊಳಿಸಿರಲಿಲ್ಲ, ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಶನಿವಾರಸಂತೆ ಕಂದಾಯ ಇಲಾಖೆ ಅಧಿಕಾರಿ ಸಂತೋಷ್ ಮತ್ತು ಸಿಬ್ಬಂದಿ ಸಮ್ಮುಖದಲ್ಲಿ ೩೦ ಸೆಂಟು ಜಾಗದಲ್ಲಿ ಕಾಫಿಗಿಡಗಳನ್ನು ಕಡಿದು ತೆರವುಗೊಳಿಸಿದರು.
ತೆರವು ಕಾರ್ಯದಲ್ಲಿ ನಿಡ್ತ ಗ್ರಾ.ಪಂ.ಸದಸ್ಯ ಹರೀಶ್, ಗ್ರಾಮಸ್ಥರುಗಳಾದ ಪೃಥ್ವಿ, ದಿವಾಕರ್, ಶಶಿಕುಮಾರ್, ಹರೀಶ್, ದ್ರುತೀರ್, ಎಂ.ಆರ್.ಹರೀಶ್ ಮುಂತಾದವರು ಪಾಲ್ಗೊಂಡಿದ್ದರು.