ಮಡಿಕೇರಿ, ಮಾ. ೨೮: ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ದೇವರ ದಾಸಿಮಯ್ಯ ಅವರು ೧೧ನೇ ಶತಮಾನದಲ್ಲಿ ಸಾಕಷ್ಟು ಬದಲಾವಣೆ ತಂದರು ಎಂದು ನಗರಸಭೆ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಹೇಳಿದರು.

ನಗರದ ಚೌಡೇಶ್ವರಿ ದೇವಾಲಯದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟಗಳ ಸಹಯೋಗದಲ್ಲಿ ನಡೆದ ವಿಶ್ವಮಾನ್ಯ ಆದ್ಯ ವಚನಕಾರ ದೇವರ ದಾಸಿಮಯ್ಯ ಅವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಹತ್ತನೇ ಶತಮಾನದ ಉತ್ತರಾರ್ಧದಲ್ಲಿ ದೇವರ ದಾಸಿಮಯ್ಯ ಅವರಿಂದ ವಚನ ಸಾಹಿತ್ಯವು ಪ್ರಾರಂಭಗೊAಡು ೧೯ನೇ ಶತಮಾನದವರೆಗೂ ಬೆಳೆದು ಬಂದಿರುವುದನ್ನು ಕಾಣುತ್ತೇವೆ. ಹಲವು ಸಾಧು ಸಂತರು, ಶರಣ, ಶರಣೇಯರ ಕ್ಷೇತ್ರ ಕಲ್ಬುರ್ಗಿ ಜಿಲ್ಲೆ ಸಾಹಿತ್ಯ ಕ್ಷೇತ್ರದಲ್ಲೂ ಹಲವು ಪ್ರಥಮಗಳನ್ನು ಸ್ಥಾಪಿಸಿದ್ದು, ದೇವರ ದಾಸಿಮಯ್ಯ ಅವರು ಈಗಿನ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನಲ್ಲಿ ಜನಿಸಿ, ವಚನ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.

ಉಪನ್ಯಾಸ ನೀಡಿದ ಬಿ.ಸಿ. ಶಂಕರಯ್ಯ ಮಾತನಾಡಿ ದೇವರ ದಾಸಿಮಯ್ಯ ಅವರು ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯಕ್ಕೆ ಆದ್ಯತೆ ನೀಡಿದ್ದರು.

ದೇವರ ದಾಸಿಮಯ್ಯ ಅವರನ್ನು ದಾಸ, ದಾಸಿಮಯ್ಯ, ದಾಸಿದೇವ, ದೇವದಾಸ, ಜೇಡರ ದಾಸಿಮಯ್ಯ, ದೇವರ ದಾಸಿಮಯ್ಯ ಹೀಗೆ ಹಲವು ಹೆಸರಿನಲ್ಲಿ ಕರೆಯುತ್ತಾರೆ ಎಂದರು.

ಪತ್ರಕರ್ತರಾದ ನಾಗರಾಜ ಶೆಟ್ಟಿ ಮಾತನಾಡಿ ಜಿಲ್ಲೆಯಲ್ಲಿ ಹೊಸದಾಗಿ ಕುಶಾಲನಗರ ಮತ್ತು ಪೊನ್ನಂಪೇಟೆ ಎರಡು ತಾಲೂಕುಗಳು ರಚಿಸಲ್ಪಟ್ಟಿವೆ. ಆ ನಿಟ್ಟಿನಲ್ಲಿ ಜಿಲ್ಲೆಯ ಯಾವುದಾದರೂ ಪ್ರಮುಖ ವೃತ್ತಕ್ಕೆ ದೇವರ ದಾಸಿಮಯ್ಯ ಹೆಸರು ಇಡಬೇಕು ಎಂದು ಮನವಿ ಮಾಡಿದರು.

ಕೊಡಗು ಜಿಲ್ಲಾ ನೇಕಾರ ಸುಮುದಾಯಗಳ ಒಕ್ಕೂಟದ ಅಧ್ಯಕ್ಷ ಟಿ.ಕೆ. ಪಾಂಡುರAಗ ಮಾತನಾಡಿ ರೈತ, ನೇಕಾರ, ಸೈನಿಕರನ್ನು ಸದಾ ಸ್ಮರಿಸಬೇಕು. ನೇಕಾರಿಕ ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ ನೀಡಬೇಕು. ಜಿಲ್ಲೆಯ ಶಿರಂಗಾದಲ್ಲಿ ಇದ್ದ ಕೈಮಗ್ಗ ಘಟಕ ಮುಚ್ಚಿ ಹೋಗಿದೆ. ಇದರ ಪುನಃಶ್ಚೇತನಕ್ಕೆ ಮುಂದಾಗಬೇಕಿದೆ ಎಂದು ಕೋರಿದರು.

ಸಮಾಜದ ಪ್ರಮುಖರಾದ ಗಜಾನನ, ಪ್ರೇಮ ಕುಮಾರ, ರಮೇಶ್, ರಾಜೇಶ್, ಜಗದೀಶ್, ಬಾಲಣ್ಣ, ಪ್ರಕಾಶ್, ಸುಲೋಚನಾ ಇತರರು ಇದ್ದರು.

ಭಾರತೀ ರಮೇಶ್ ಮತ್ತು ತಂಡದವರು ನಾಡಗೀತೆ ಹಾಡಿದರು. ಮಣಜೂರು ಮಂಜುನಾಥ್ ಸ್ವಾಗತಿಸಿದರು. ನಿವೃತ್ತ ದೈಹಿಕ ಶಿಕ್ಷಕ ಗಣೇಶ್ ನಿರೂಪಿಸಿದರು. ಚಿನ್ನಸ್ವಾಮಿ ವಂದಿಸಿದರು.