ಕುಶಾಲನಗರ, ಮಾ. ೨೭: ಜಿ ಕನ್ನಡ ವಾಹಿನಿ ನಡೆಸುವ ಸರಿಗಮಪ ರಿಯಾಲಿಟಿ ಶೋನಲ್ಲಿ ಪ್ರಥಮ ಸ್ಥಾನ ಪಡೆದ ಕುಶಾಲನಗರದ ವಿದ್ಯಾರ್ಥಿನಿ ಪ್ರಗತಿ ಅವರನ್ನು ಸರ್ಕಾರಿ ಶಾಲೆಯ ಶಿಕ್ಷಕರು ಅವರ ಮನೆಗೆ ತೆರಳಿ ಸನ್ಮಾನಿಸಿ ಗೌರವಿಸಿದರು.
ಇತ್ತೀಚೆಗೆ ಕೊಪ್ಪಳದಲ್ಲಿ ಹಾಡು ಹೇಳುವ ಸ್ಪರ್ಧೆಯ ಅಂತಿಮ ಸುತ್ತು ನಡೆದು ಪ್ರಗತಿ ವಿಜೇತರಾಗಿ ಕುಶಾಲನಗರಕ್ಕೆ ಆಗಮಿಸಿದ್ದರು. ೨೧ ಲಕ್ಷ ಮೌಲ್ಯದ ನಿವೇಶನ ಮತ್ತು ೪ ಲಕ್ಷ ರೂಪಾಯಿ ನಗದು ಬಹುಮಾನ ದೊರೆತಿದೆ ಎಂದು ಬಾಲಕಿಯ ತಂದೆ ಬಸವರಾಜ್ ಬಡಿಗೇರ್ ತಮ್ಮ ಸಂತಸ ಹಂಚಿಕೊAಡಿದ್ದಾರೆ. ಸ್ಪರ್ಧೆಯ ತೀರ್ಪುಗಾರರಾಗಿದ್ದ ಅರ್ಜುನ್ ಜನ್ಯ ತಮ್ಮ ಚಿತ್ರದಲ್ಲಿ ಬಾಲಕಿ ಪ್ರಗತಿಗೆ ನಟನೆಗೆ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಪೋಷಕರು ತಿಳಿಸಿದ್ದಾರೆ.
ಪ್ರಗತಿ ವ್ಯಾಸಂಗ ಮಾಡುತ್ತಿರುವ ಶಾಲೆಯ ಶಿಕ್ಷಕರಾದ ಶಿವಲಿಂಗು, ಬಸವರಾಜಪ್ಪ, ಜಂಶೀರ್ ಅಹಮದ್ ಖಾನ್, ಡಾ. ಸದಾಶಿವ ಪಲ್ಯದ್, ಉ.ರಾ. ನಾಗೇಶ್, ಶಾಂತ ಕುಮಾರ್, ಕುಮಾರ್ ಮತ್ತು ಜನದ್ವನಿ ವೇದಿಕೆಯ ಸಂಚಾಲಕ ಕೆ.ಎಸ್.ಮಹೇಶ್ ಬಾಲಕಿ ಪ್ರಗತಿಯ ಮನೆಗೆ ತೆರಳಿ ಸನ್ಮಾನಿಸಿ ಗೌರವಿಸಿದರು.