ಗೋಣಿಕೊಪ್ಪಲು, ಮಾ. ೨೮: ಪೊನ್ನಂಪೇಟೆ ತಾಲೂಕಿನ ವಿವಿಧ ಪಲಾನುಭವಿಗಳಿಗೆ ೯೪ ಸಿ ಅಡಿಯಲ್ಲಿ ಹಕ್ಕುಪತ್ರ ಹಾಗೂ ಸಾಗುವಳಿ ಚೀಟಿಯನ್ನು ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ವಿತರಿಸಿದರು.

ಕೊಡಗು ಜಿಲ್ಲಾಡಳಿತ, ಪೊನ್ನಂಪೇಟೆ ತಾಲೂಕು ಆಡಳಿತ, ಪೊನ್ನಂಪೇಟೆ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಪೊನ್ನಂಪೇಟೆ ತಾಲೂಕು ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಗುವಳಿ ಚೀಟಿ, ವಿತರಣಾ ಹಾಗೂ ೯೪ಸಿ ಅಡಿಯಲ್ಲಿ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ಜರುಗಿತು.

ಫಲಾನುಭವಿಗಳಿಗೆ ಹಕ್ಕುಪತ್ರ ಹಾಗೂ ಸಾಗುವಳಿ ಚೀಟಿ ವಿತರಿಸಿ ಮಾತನಾಡಿದ ಶಾಸಕ ಕೆ.ಜಿ. ಬೋಪಯ್ಯ ಸರ್ಕಾರದ ನಿಯಮ ಗಳನ್ನು ಅಳವಡಿಸಿಕೊಂಡು ಈ ಯೋಜನೆಯಡಿಯಲ್ಲಿ ಅರ್ಹತೆ ಹೊಂದಿದ್ದ ಫಲಾನುಭವಿಗಳಿಗೆ ಪ್ರಯೋಜನ ನೀಡಲಾಗಿದೆ. ಇದರ ಸದುಪಯೋಗ ಪಡಿಸಿಕೊಳ್ಳಬೇಕು, ಮುಂದೆಯೂ ಹಲವಾರು ಅರ್ಜಿಗಳನ್ನು ಪರಿಶೀಲಿಸಿ ಅರ್ಹ ವ್ಯಕ್ತಿಗಳಿಗೆ ನೀಡಲಾಗುತ್ತದೆ ಎಂದರು.

ಬಗರ್ ಹುಕುಂ ಸಮಿತಿಯ ಕಾಡ್ಯಮಾಡ ಗಿರೀಶ್ ಗಣಪತಿ ಮಾತನಾಡಿ, ನಾಗರಿಕರಿಗೆ ಯೋಜನೆಯ ಫಲ ದೊರೆಯುತ್ತಿದೆ ಇದರ ಪ್ರಯೋಜನ ಪಡೆದುಕೊಳ್ಳಲು ತಿಳಿಸಿದರು.

ಸಮಿತಿಯ ಸದಸ್ಯರು ಸಭೆಗಳನ್ನು ನಡೆಸಿ ಸರ್ಕಾರದ ನಿಯಮಗಳನ್ನು ಪಾಲಿಸುವ ಮೂಲಕ ಹಕ್ಕುಪತ್ರ ಹಾಗೂ ಸಾಗುವಳಿ ಚೀಟಿ ನೀಡಿರುವು ದಾಗಿ ಹೇಳಿದ ಗಿರೀಶ್ ಗಣಪತಿ, ಸಾಗುವಳಿ ಚೀಟಿ ಹಾಗೂ ೯೪ ಸಿ ಅಡಿ ಯಲ್ಲಿ ಹಕ್ಕು ನೀಡಲಾಗಿದೆ ಎಂದರು.

ಸಭೆಯಲ್ಲಿ ಉಪಸ್ಥಿತರಿದ್ದ ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಪ್ರಶಾಂತ್ ಮಾತನಾಡಿ, ಪೊನ್ನಂಪೇಟೆ ತಾಲೂಕು ವತಿಯಿಂದ, ಶಾಸಕರ ವಿಶೇಷ ಆಸಕ್ತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ, ಮುಂದಿನ ದಿನಗಳಲ್ಲಿ ಶಾಸಕರ ಆಶಯದಂತೆ ಉಳಿದ ಅರ್ಜಿಗಳನ್ನು ಪರಿಶೀಲನೆ ನಡೆಸಿ, ಆದಷ್ಟು ಬೇಗನೆ ಸಮಿತಿಯ ಮುಂದಿಟ್ಟು ಅರ್ಹತೆ ಇರುವ ಫಲಾನುಭವಿಗಳಿಗೆ ಹಕ್ಕುಪತ್ರ ಹಾಗೂ ಸಾಗುವಳಿ ಚೀಟಿ ವಿತರಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಬಗರ್ ಹುಕುಂ ಸಮಿತಿಯ ಸದಸ್ಯರಾದ ತೀತಿಮಾಡ ಲಾಲ, ಯಮುನಾ ಚಂಗಪ್ಪ, ಚಲನ್ ಕುಮಾರ್, ರೆವಿನ್ಯೂ ಅಧಿಕಾರಿ ಸುಧೀಂದ್ರ ಸೇರಿದಂತೆ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.