ಮಡಿಕೇರಿ, ಮಾ. ೨೮: ಹೊದ್ದೂರಿನ ಕಬ್ಬಡಕೇರಿಯ ಆಟದ ಮೈದಾನದಲ್ಲಿ ಶ್ರೀ ವಿನಾಯಕ ಸೇವಾ ಸಮಿತಿ, ಹೊದ್ದೂರು-ಕೋಡಂಬೂರು ಇವರ ಸಂಯುಕ್ತ ಆಶ್ರಯದಲ್ಲಿ ಮೊದಲನೇ ವರ್ಷದ ಜಿಲ್ಲಾಮಟ್ಟದ ಹಿಂದೂ ವಾಲಿಬಾಲ್ ಪಂದ್ಯಾಟವನ್ನು ಆಯೋಜಿಸಲಾಗಿತ್ತು.

ಕುಯ್ಯಂಗೇರಿ ಶ್ರೀ ಭಗವತಿ ಫ್ರೆಂಡ್ಸ್ ಪ್ರಥಮ ಸ್ಥಾನ ಪಡೆದು ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಮಡಿಕೇರಿ ಟೀಂ ಬ್ರದರ್ಸ್ ದ್ವಿತೀಯ ಸ್ಥಾನ ಪಡೆಯಿತು.

ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಪಂದ್ಯಾಟವನ್ನು ಉದ್ಘಾಟಿಸಿದರು. ಸೋಲು-ಗೆಲುವನ್ನು ಕ್ರೀಡಾಪಟುಗಳು ಸಮನಾಗಿ ಸ್ವೀಕಾರ ಮಾಡಬೇಕು ಎಂದು ಅವರು ಹೇಳಿದರು. ಶ್ರೀ ವಿನಾಯಕ ಸೇವಾ ಸಮಿತಿಯವರು ಎಲ್ಲರನ್ನೂ ಒಗ್ಗೂಡಿಸಲು ಈ ವಾಲಿಬಾಲ್ ಪಂದ್ಯಾಟದ ಮುಖಾಂತರ ಮಾಡಿರುವ ಪ್ರಯತ್ನ ಶ್ಲಾಘನೀಯ ಎಂದರು.

ಸಮಾಜ ಸೇವಕ ಚೌರೀರ ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಬಿ.ಆರ್. ಪ್ರಶಾಂತ್, ಕಬಡಕೇರಿ ಹಾಗೂ ಕೋಡಂಬೂರು ಫ್ರೆಂಡ್ಸ್ ಇಲವೆನ್ ಗೆಳೆಯರ ಬಳಗದವರ ಪ್ರಯತ್ನದಿಂದಾಗಿ ಆಕರ್ಷಕ ವಾಲಿಬಾಲ್ ಪಂದ್ಯಾಟ ನಡೆಯುವಂತಾಯಿತು. ಕ್ರೀಡಾಪಟುಗಳು ತಮ್ಮ ಆರೋಗ್ಯ ಹಾಗೂ ದೇಹದ ಸಮತೋಲನವನ್ನು ಕಾಪಾಡಿಕೊಳ್ಳಬೇಕು ಎಂದರು. ಹರೀಶ್ ವಂದಿಸಿದರು.