ಕುಶಾಲನಗರ, ಮಾ.೨೭: ದಕ್ಷಿಣ ವಲಯ ಪೊಲೀಸ್ ಮಹಾ ನಿರೀಕ್ಷಕರಾದ ಪ್ರವೀಣ್ ಮಧುಕರ್ ಪವಾರ್ ಅವರು ಕುಶಾಲನಗರಕ್ಕೆ ಭೇಟಿ ನೀಡಿ ಮುಂಬರುವ ಚುನಾವಣೆ ಸಂದರ್ಭದ ಭದ್ರತಾ ವ್ಯವಸ್ಥೆಗಳ ಬಗ್ಗೆ ಸೋಮವಾರಪೇಟೆ ಉಪವಿಭಾಗದ ಪೊಲೀಸ್ ಅಧಿಕಾರಿಗಳ ಜೊತೆಗೆ ಚರ್ಚಿಸಿದರು.

ಕುಶಾಲನಗರ ಡಿವೈಎಸ್ಪಿ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಉಪ ವಿಭಾಗದ ವ್ಯಾಪ್ತಿಯ ಸೂಕ್ಷ್ಮ, ಅತಿ ಸೂಕ್ಷ್ಮ ಮತಗಟ್ಟೆಗಳ ಬಗ್ಗೆ ಮಾಹಿತಿ ಪಡೆದ ಐಜಿಪಿ ಪವಾರ್, ನಿರ್ಭೀತವಾಗಿ ಮತದಾನ ನಡೆಯುವ ಸಂಬAಧ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ ನೀಡಿದರು. ಚುನಾವಣೆ ಸಂದರ್ಭದಲ್ಲಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳಲು ನಿರ್ದೇಶನ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ಮಧುಕರ್ ಅವರಿಗೆ ಹೂಗುಚ್ಚ ನೀಡುವ ಮೂಲಕ ಸ್ವಾಗತಿಸಿ ಬರಮಾಡಿಕೊಂಡರು. ಸೋಮವಾರಪೇಟೆ ಉಪಭಾಗದ ಪೊಲೀಸ್ ಉಪ ಅಧೀಕ್ಷಕ ಆರ್. ವಿ. ಗಂಗಾಧರಪ್ಪ, ಶನಿವಾರಸಂತೆ ಸೋಮವಾರಪೇಟೆ, ಕುಶಾಲನಗರ ಸುಂಟಿಕೊಪ್ಪ ವ್ಯಾಪ್ತಿಯ ಪೊಲೀಸ್ ಇನ್ಸ್ಪೆಕ್ಟರ್‌ಗಳು, ಉಪನಿರೀಕ್ಷಕರು ಉಪಸ್ಥಿತರಿದ್ದರು. ಕುಶಾಲನಗರಕ್ಕೆ ಆಗಮಿಸಿದ ಐಜಿಪಿ ಅವರಿಗೆ ಇದೇ ಸಂದರ್ಭ ಗೌರವ ರಕ್ಷೆ ನೀಡಲಾಯಿತು.