ಕಣಿವೆ, ಮಾ. ೨೭: ಕುಶಾಲನಗರ ತಾಲೂಕಿನ ಹಾರಂಗಿ ಬಳಿಯ ಅತ್ತೂರು ಗ್ರಾಮದಲ್ಲಿ ಕಾಡಾನೆ ದಾಳಿ ಮಾಡಿದ ಪರಿಣಾಮ ಕೃಷಿಕರೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಭಾನುವಾರ ರಾತ್ರಿ ನಡೆದಿದೆ.

ಅತ್ತೂರು ಗ್ರಾಮದ ಕೃಷಿಕ ಬೆಳ್ಳಿಪ್ಪಾಡಿ ಲೋಕೇಶ್ ಎಂಬವರು ಗಾಯಗೊಂಡವರು. ಭಾನುವಾರ ರಾತ್ರಿ ೮ ಗಂಟೆ ಸಮಯದಲ್ಲಿ ಕಾಡಾನೆ ತೋಟಕ್ಕೆ ನುಗ್ಗಿದ ಬಗ್ಗೆ ನೆರೆಯ ನಿವಾಸಿ ಅಶೋಕ್ ಎಂಬವರು ಲೋಕೇಶ ಅವರಿಗೆ ಮಾಹಿತಿ ನೀಡಿದ್ದಾರೆ.

ಬಳಿಕ ಎಚ್ಚೆತ್ತುಕೊಂಡ ಲೋಕೇಶ್ ಬೆಳೆದ ಗೆಣಸು ಫಸಲನ್ನು ಕಾಡಾನೆಗಳು ತಿಂದು ಹಾಗೂ ತುಳಿದು ಹಾನಿಪಡಿಸುತ್ತವೆ ಎಂಬ ಆತಂಕದಿAದ ಕೈಯಲ್ಲಿ ಟಾರ್ಚ್ ಹಿಡಿದು ತೋಟದತ್ತ ತೆರಳಿದ್ದಾರೆ ಎನ್ನಲಾಗಿದೆ. ಅಷ್ಟರಲ್ಲಿ ಒಂದು ಬದಿಯಲ್ಲಿ ಕಾಡಾನೆಯ ಮರಿ ಗೋಚರವಾದಾಗ ಅದರತ್ತ ಟಾರ್ಚ್ ಬಿಟ್ಟು ಓಡಿಸುವ

(ಮೊದಲ ಪುಟದಿಂದ) ಯತ್ನದಲ್ಲಿದ್ದಾಗ ಮತ್ತೊಂದು ಬದಿಯಲ್ಲಿದ್ದ ಇನ್ನೊಂದು ಕಾಡಾನೆ ಹಠಾತ್ತನೆ ಲೋಕೇಶ್ ಮೇಲೆ ದಾಳಿ ನಡೆಸಿದೆ. ಪರಿಣಾಮ ಒಂದು ಕಾಲು ಸಂಪೂರ್ಣ ಮುರಿತಕ್ಕೊಳಗಾಗಿದೆ. ಹಾಗೆಯೇ ಸೊಂಟದ ಭಾಗಕ್ಕೂ ತೀವ್ರ ಸ್ವರೂಪದ ಪೆಟ್ಟು ಬಿದ್ದು ಕಿಡ್ನಿಯ ಭಾಗಕ್ಕೆ ಘಾಸಿಯಾಗಿರುವುದಾಗಿ ಆಸ್ಪತ್ರೆಯ ಮೂಲಗಳು ತಿಳಿಸಿವೆ. ಕೂಡಲೇ ಗಾಯಾಳು ಲೋಕೇಶ ಅವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯರು ಮಡಿಕೇರಿ ಜಿಲ್ಲಾಸ್ಪತ್ರೆಗೆ ಕೊಂಡೊಯ್ದು ಹೆಚ್ವಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈಗಾಗಲೇ ತೋಟಗಾರಿಕಾ ಇಲಾಖೆಯ ಸರಹದ್ದಿನವರೆಗೆ ಆಗಿರುವ ಸೋಲಾರ್ ತಂತಿ ಬೇಲಿ ಹಾಗೂ ಕಂದಕ ನಿರ್ಮಾಣ ಕಾಮಗಾರಿಯನ್ನು ಮುಂದುವರೆಸಿ ಗ್ರಾಮ ವ್ಯಾಪ್ತಿಯ ಕೃಷಿಕರಿಗೆ ಹಾಗೂ ಸಾರ್ವಜನಿಕರಿಗೆ ಅಭಯ ನೀಡಬೇಕೆಂದು ಸ್ಥಳೀಯರಾದ ಮಡ್ತಿಲ ರವಿ, ಮನೋಜ್ ಕುಮಾರ್, ನರೇಂದ್ರ, ಜೋಯಪ್ಪ, ಶ್ರೀನಿವಾಸ್ ಮೊದಲಾದವರು ಒತ್ತಾಯಿಸಿದ್ದಾರೆ.

ಆನೆಕಾಡು ಮೀಸಲು ಅರಣ್ಯದಲ್ಲಿ ತಿನ್ನಲು ಸೂಕ್ತವಾದ ಆಹಾರ ಇಲ್ಲದೆ, ಹಸಿವು ನೀಗಿಸಿಕೊಳ್ಳಲು ಕಾಡಾನೆಗಳು ತೋಟಗಳಿಗೆ ಲಗ್ಗೆಯಿಟ್ಟು ಕೃಷಿಕರು ಕಷ್ಟಪಟ್ಟು ಬೆಳೆದ ಫಸಲನ್ನು ಕ್ಷಣಾರ್ಧದಲ್ಲಿ ತುಳಿದು ಹಾಗೂ ತಿಂದು ಹಾನಿಪಡಿಸುತ್ತಿವೆ. ಅರಣ್ಯ ಇಲಾಖೆ ಕಾಡಾನೆಗಳಿಗೆ ಆಹಾರ ಒದಗಿಸುವ ನಿಟ್ಟಿನಲ್ಲಿ ಪೂರಕ ಯೋಜನೆ ರೂಪಿಸುವಂತೆ ಆಗ್ರಹಿಸಿದ್ದಾರೆ.

(ವರದಿ : ಕೆ.ಎಸ್.ಮೂರ್ತಿ)