ವೀರಾಜಪೇಟೆ, ಮಾ. ೨೭: ಅಮ್ಮತ್ತಿ ಕಾರ್ಮಾಡು ಪಂಚಾಯಿತಿ ವ್ಯಾಪ್ತಿಯ ದಲಿತರು ಮತ್ತು ಬಡ ಕಾರ್ಮಿಕರು ನಿವೇಶನಕ್ಕಾಗಿ ಕಳೆದ ೩೦ ವರ್ಷಗಳಿಂದಲೂ ಹೋರಾಟ ನಡೆಸಿ ಮನವಿ ಸಲ್ಲಿಸಿದರೂ ಅಧಿಕಾರಿ ಗಳು ಹಾಗೂ ಜನಪ್ರತಿನಿಧಿಗಳು ಸ್ಪಂದಿಸದ ಹಿನ್ನೆಲೆ ಮುಂದಿನ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ನಿವೇಶನ ಹೋರಾಟ ಸಮಿತಿಯ ಗೌರವ ಅಧ್ಯಕ್ಷ ಎ. ಮಹದೇವ್ ಎಚ್ಚರಿಸಿದರು.
ವೀರಾಜಪೇಟೆ ಬಳಿಯ ಅಮ್ಮತ್ತಿ ಕಾರ್ಮಾಡು ಚೌಡೇಶ್ವರಿ ನಗರದ ಅಂಬೇಡ್ಕರ್ ಸಮುದಾಯ ಭವನದಲ್ಲಿ ನಿವೇಶನ ಹೋರಾಟ ಸಮಿತಿ ವತಿಯಿಂದ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮನೆ ಇಲ್ಲದವರಿಗೆ ಸರಕಾರಿ ಜಾಗದಲ್ಲಿ ನಿವೇಶನ ನೀಡುವಂತೆ ತಾಲೂಕು ಕಚೇರಿ ಹಾಗೂ ಗ್ರಾಮ ಪಂಚಾಯಿತಿ ಎದುರು ಅನೇಕ ಬಾರಿ ಪ್ರತಿಭಟನೆ ನಡೆಸಿ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಇದುವರೆಗೆ ಪ್ರಯೋಜನವಾಗಿಲ್ಲ. ಸರಕಾರಿ ಜಾಗ ಒತ್ತುವರಿಯಿಂದ ಉಳ್ಳವರ ಪಾಲಾಗಿದೆ. ಅಧಿಕಾರಿಗಳು ಕಂಡರು ಕಾಣದಂತಿದ್ದಾರೆ. ಆದ್ದರಿಂದ ಈ ಚುನಾವಣೆಯನ್ನು ಬಹಿಷ್ಕರಿ ಸುವುದಾಗಿ ತಿಳಿಸಿದ ಮಹದೇವ್ ಅವರು ಮತದಾನದ ಪಟ್ಟಿಯಲ್ಲಿ ಹೆಸರು ಸೇರಿಸಲು ಸರಕಾರದ ಆದೇಶವಿದ್ದರೂ ಮತದಾರರ ಹೆಸರನ್ನೇ ಪಟ್ಟಿಯಿಂದ ತೆಗೆದು ಹಾಕ ಲಾಗಿದೆ ಈ ಸಂಬAಧ ಕಾನೂನು ಹೋರಾಟ ನಡೆಸುವುದಾಗಿ ಹೇಳಿದರು.
ಕಾರ್ಮಾಡು ಚೌಡೇಶ್ವರಿ ನಗರದ ಶೀಲಾ ಮಾತನಾಡಿ, ಕಾರ್ಮಾಡು ಪಂಚಾಯಿತಿ ನಿವೇಶನ ನೀಡುವು ದಾಗಿ ದಾಖಲೆಗಳನ್ನು ಪಡೆದು ಕೊಂಡಿದ್ದರು. ಆದರೆ ಈಗ ಕೇಳಿದರೆ ನಿವೇಶನವೇ ಇಲ್ಲ ಎನ್ನುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸಭೆಯಲ್ಲಿ ಸ್ಥಳೀಯ ನಿವಾಸಿಗಳಾದ ಆರ್. ಹೊನ್ನಪ್ಪ, ಕೆ.ಜಿ. ಯಶೋದ, ಅಮ್ಮತ್ತಿ ಜಯಮ್ಮ, ಪಾಪಣ್ಣ, ಆರ್. ಶ್ರೀಧರ್, ಚೈತ್ರ ಗಣೇಶ್, ವೀಣಾಕುಮಾರಿ, ಕುಸುಮ ನಾರಾಯಣ, ಸುಶಿಲಾ ಮನೋಜ್, ವೇಲಾಯುದನ್, ಸುರೇಶ್, ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.