ಕೂಡಿಗೆ, ಮಾ. ೨೭: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿರುಪಾಕ್ಷಪುರದ ಗ್ರಾಮ ಅರಣ್ಯ ಹಕ್ಕು ಸಮಿತಿಯ ವತಿಯಿಂದ ೭೦ ಮಂದಿ ಫಲಾನುಭವಿಗಳಿಗೆ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಅವರು ಹಕ್ಕುಪತ್ರ ವಿತರಣೆ ಮಾಡಿದರು.
ವಿರೂಪಾಕ್ಷಪುರದ ಅಂಗನವಾಡಿ ಕೇಂದ್ರ ಬಳಿ ಸಮುದಾಯ ಭವನದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ರಂಜನ್ ಅವರು, ಪ್ರತಿಯೊಬ್ಬರಿಗೂ ಒಂದು ಸೂರು ಒದಗಿಸಿಕೊಡುವ ಸರಕಾರದ ಆಶಯದಂತೆ ಅರಣ್ಯ ವ್ಯಾಪ್ತಿಯ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಗಿದೆ. ಹಲವು ದಶಕಗಳ ಕನಸನ್ನು ಸರಕಾರ ಸಾಕಾರ ಮಾಡಿದೆ. ಈ ಹಕ್ಕುಪತ್ರದ ಮೂಲಕ ಸರಕಾರದ ಅಗತ್ಯ ಸೌಲಭ್ಯಗಳನ್ನು, ವಿವಿಧ ಸವಲತ್ತುಗಳನ್ನು ಪಡೆದುಕೊಳ್ಳಲು ಸಾಧ್ಯವಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುವುದು ಎಂದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯ ಅರಣ್ಯ ಹಕ್ಕು ಸಮಿತಿ ಮಾರ್ಗದರ್ಶಕ ಆರ್.ಕೆ. ಚಂದ್ರು ಮಾತನಾಡಿ, ಹಲವು ಮಂದಿ ಇದೊಂದು ರಾಜಕೀಯ ಗಿಮಿಕ್ ಎಂದು ಫಲಾನುಭವಿಗಳ ನಡುವೆ ಅಪಪ್ರಚಾರ ನಡೆಸಿದ್ದರು. ಆದರೆ ಶತಮಾನಗಳ ಬೇಡಿಕೆಯನ್ನು ಕೇವಲ ೫ ತಿಂಗಳಲ್ಲಿ ನೆರವೇರಿಸಿ ಹಕ್ಕುಪತ್ರ ವಿತರಿಸುವ ಮೂಲಕ ಸರಕಾರ ಬಡವರ ಪರವಾಗಿದೆ ಎಂಬುದನ್ನು ಶಾಸಕ ಅಪ್ಪಚ್ಚು ರಂಜನ್ ಅವರು ಸಾಬೀತುಪಡಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭ ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ ಗಿರೀಶ್, ಕಾರ್ಯದರ್ಶಿ ಕೆ.ಟಿ. ಕೇಶವ, ಕಾಫಿ ಬೆಳೆಗಾರರಾದ ದತ್ತಣ್ಣ, ಪ್ರಭುಣ್ಣ, ದುಬಾರೆ ರತೀಶ್, ಅನಿಲ್, ಗ್ರಾಮದ ಮುಖಂಡರು, ಸೇರಿದಂತೆ ನೂರಾರು ಗ್ರಾಮಸ್ಥರು, ಫಲಾನುಭವಿಗಳು ಹಾಜರಿದ್ದರು.