ಪೆರಾಜೆ, ಮಾ. ೨೬: ರೈತರ ಸಮಸ್ಯೆಗಳು ಬೆಟ್ಟದಷ್ಟಿವೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ವಿವಿಧ ಮಾದರಿಯ ಸಮಸ್ಯೆಗಳಿವೆ. ಸರ್ಕಾರ ಮತ್ತು ಅಧಿಕಾರಿಗಳ ವರ್ಗವು ರೈತ ಪರ ಕಾಳಜಿಯಿಲ್ಲದೆ ಭರವಸೆ ಗಳೊಂದಿಗೆ ದಿನದೂಡುತ್ತಿವೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘದ ಪೆರಾಜೆ ಗ್ರಾಮ ಘಟಕದ ವತಿಯಿಂದ ಪೆರಾಜೆಯ ಶ್ರೀ ಅನ್ನಪೂರ್ಣೇಶ್ವರಿ ಕಲಾ ಮಂದಿರ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ವಾರ್ಷಿಕ ಮಹಾಸಭೆ ಮತ್ತು ಘಟಕಕ್ಕೆ ನೂತನ ಸದಸ್ಯರ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಹಲವಾರು ಜ್ವಲಂತ ಸಮಸ್ಯೆಗಳಿವೆ. ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಂಘಟನೆಯ ಪಾತ್ರ ಬಹಳಷ್ಟಿದೆ. ಸ್ವಾತಂತ್ರö್ಯ ಬಂದು ಹಲವು ದಶಕಗಳು ಸಂದರೂ, ರೈತರ ಬವಣೆಯನ್ನು ನೀಗಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆೆ. ಈ ಭಾಗದಲ್ಲಿ ಅಡಿಕೆ ಬೆಳೆಗೆ ತಗಲಿರುವ ಹಳದಿ ರೋಗದ ಕುರಿತಾಗಿ ಕೆಲವು ತಿಂಗಳ ಹಿಂದೆ ಜಿಲ್ಲಾಧಿಕಾರಿ ಗಳೊಂದಿಗೆ ರೈತ ಸಂಘಟನೆಯ ಸದಸ್ಯರು ಮತ್ತು ಇಲ್ಲಿನ ಅಡಿಕೆ ಬೆಳೆಗಾರರು ಭೇಟಿ ನೀಡಿದ್ದರು. ವಿಜ್ಞಾನಿಗಳನ್ನು ಕರೆತಂದು ಸ್ಥಳ ಪರಿಶೀಲಿಸಿ ಅಡಿಕೆ ಬೆಳೆಗೆ ತಗುಲಿರುವ ರೋಗಕ್ಕೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಯೋಜನೆ ಮಾಡಲಾಗುವುದು ಎಂಬ ಭರವಸೆ ದೊರಕಿದೆ.
ಪೆರಾಜೆ ಗ್ರಾಮ ಘಟಕದ ಗೌ.ಅಧ್ಯಕ್ಷ ಹರಿಶ್ಚಂದ್ರ ಮುಡುಕಜ್ಜೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪೆರಾಜೆ ಗ್ರಾಮವು ಎರಡು ಜಿಲ್ಲೆಗಳ ಗಡಿಭಾಗವಾದ ಗ್ರಾಮವಾಗಿದೆ. ಒಂದು ದಶಕದಿಂದ ಈ ಭಾಗದ ಅಡಿಕೆ ಬೆಳೆಗೆ ಹಳದಿ ರೋಗ ಕಾಡುತ್ತಿದೆ. ಆದರೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಅಸಾಧ್ಯ ವಾಗಿದೆ. ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆಗಳು ನಡೆದರೂ, ಯಾವುದೇ ಪರಿಹಾರ ದೊರೆತಿಲ್ಲ. ನಷ್ಟಗೊಂಡ ಅಡಿಕೆ ಬೆಳೆಗೆ ಪರ್ಯಾಯ ಬೆಳೆ ಇಲ್ಲದಾಗಿದ್ದು. ಬೆಳೆಯನ್ನು ನಂಬಿಕೊAಡು ಜೀವನ ಸಾಗಿಸುವ ರೈತರು ಸಂಕಷ್ಟದಲ್ಲಿದ್ದಾರೆÉ. ರೈತರ ಸಮಸ್ಯೆಗಳನ್ನು ಬಗೆಹರಿಸಲು ಇದೊಂದೇ ವೇದಿಕೆಯಾಗಿದೆ. ಈ ನಿಟ್ಟಿನಲ್ಲಿ ಸರ್ವ ಸದಸ್ಯರು ಸಂಘಟಿತರಾಗಿ ಹೋರಾಟದ ಮೂಲಕ ಯಶಸ್ಸನ್ನು ಕಾಣಬೇಕು ಎಂದು ಹೇಳಿದರು.
ಕಾರ್ಯಕ್ರಮದ ಮೊದಲಿಗೆ ಮೃತ ಹೊಂದಿದ ರೈತರಿಗೆ ಗೌರವ ಸೂಚಕವಾಗಿ ಒಂದು ನಿಮಿಷಗಳ ಕಾಲ ಮೌನಾಚರಣೆ ನೆರವೇರಿಸಲಾಯಿತು. ಪೆರಾಜೆ ಗ್ರಾಮದ ಸುಮಾರು ೨೩ ಮಂದಿ ನೂತನ ಸದಸ್ಯರು ಸಂಘದ ಸದಸ್ಯತ್ವ ಪಡೆದುಕೊಂಡರು. ನೂತನ ಸದಸ್ಯರಿಗೆ ಸಂಘಟನೆಯ ಪ್ರಮುಖರು ರೈತ ಸಂಘಟನೆಯ ಹಸಿರು ಶಾಲು ಹೊದಿಸಿ ಗೌರವಿಸಿದರು. ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜೈ ಬೋಪಯ್ಯ ಅವರು ನೂತನ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು. ಕರ್ನಾಟಕ ರಾಜ್ಯ ರೈತ ಸಂಘದ ಪೆರಾಜೆ ಘಟಕದ ಕಾರ್ಯದರ್ಶಿ ಅಶೋಕ್ ಪೀಚೆ ಅವರು ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿಗಳಾದ ನೆಕ್ಕಿಲ ಗಂಗಾಧರ್ ಅವರು ಲೆಕ್ಕಪತ್ರ ಮಂಡನೆ ಮಾಡಿದರು.
ಪೆರಾಜೆ ಗ್ರಾಮ ಘಟಕದ ಅಧ್ಯಕ್ಷ ಬಾಲಕೃಷ್ಣ ನಿಡ್ಯಮಲೆ ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಉಪಾಧ್ಯಕ್ಷ ವೇಣು ಗೋಪಾಲ್ ಬಂಗಾರಕೋಡಿ ಅವರು ಸರ್ವರನ್ನು ಸ್ವಾಗತಿಸಿ ನಿರೂಪಣೆ ಮಾಡಿದರು. ಪ್ರಧಾನ ಕಾರ್ಯದರ್ಶಿಗಳಾದ ಬಂಗಾರಕೋಡಿ ಪುರುಶೋತ್ತಮ ಅವರು ವಂದನಾರ್ಪಣೆ ಮಾಡಿದರು.
ಜಿಲ್ಲಾ ಘಟಕದ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಮಾಯಮುಡಿ ವಲಯ ಅಧ್ಯಕ್ಷ ಪುಚ್ಚಿಮಾಡ ರಾಯ್, ನೆಲಜಿ ವಲಯ ಅಧ್ಯಕ್ಷ ಪಾಳೆಯಡ ಕೃಪ, ಶೈಲೇಶ್ ಬೆಟೋಳಿ ಸೇರಿದಂತೆ ಪೆರಾಜೆ ಗ್ರಾಮ ಘಟಕದ ಪದಾಧಿಕಾರಿಗಳು, ನಿರ್ದೇಶಕರುಗಳು, ಪೆರಾಜೆ ಗ್ರಾಮದ ಬೆಳೆಗಾರರು ಮಹಾಸಭೆಯಲ್ಲಿ ಹಾಜರಿದ್ದರು.
-ಕೆ.ಕೆ.ಎಸ್.