ಕೂಡಿಗೆ, ಮಾ. ೨೬: ಕೂಡಿಗೆಯ ಕೊಡಗು ಸೈನಿಕ ಶಾಲೆಯ ಎನ್.ಸಿ.ಸಿ. ಘಟಕ ಹಾಗೂ ಹೆಬ್ಬಾಲೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ಹೆಬ್ಬಾಲೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಘನ ತ್ಯಾಜ್ಯ ವಸ್ತುಗಳ ಸಂಗ್ರಹ ಮಾಡುವ ಮೂಲಕ ಸ್ವಚ್ಛತಾ ಆಂದೋಲನವನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭ ಶಾಲಾ ಆವರಣವನ್ನು ಸ್ವಚ್ಛಗೊಳಿಸಲಾಯಿತು. ಈ ವೇಳೆಯಲ್ಲಿ ಸೈನಿಕ ಶಾಲೆಯ ವತಿಯಿಂದ ಶಾಲಾ ಮಕ್ಕಳಿಗೆ ಲೇಖನಿಯ ಸಾಮಗ್ರಿಗಳು ಮತ್ತು ಭಾರತ ಸರ್ಕಾರದ ರಕ್ಷಣಾ ಇಲಾಖೆಯ ಪ್ರಚಾರ ಸಾಮಗ್ರಿಗಳನ್ನು ವಿತರಣೆ ಮಾಡಿದರು.
ಈ ಸಂದರ್ಭ ಶಾಲಾ ಮುಖ್ಯೋಪಾಧ್ಯಾಯ ವೆಂಕಟೇಶ್, ಸೈನಿಕ ಶಾಲೆ ಎನ್.ಸಿ.ಸಿ. ಅಧಿಕಾರಿಗಳಾದ ವೈ. ವೆಂಕಟರಮಣ್ಣ, ಜಿ.ಕೆ. ಮಂಜಪ್ಪ, ಸುಬೇದಾರ್ ಜಿತೇಂದರ್ ಸಿಂಗ್, ಹವಾಲ್ದಾರ್ ಬಿಸ್ವಾಸ್, ಶಿಕ್ಷಕರಾದ ಎಂ.ಹೆಚ್. ಪ್ರಸಾದ್, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಮಂಜುನಾಥ ಸೇರಿದಂತೆ ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.