ನಾಪೋಕ್ಲು, ಮಾ. ೨೭: ಏಪ್ರಿಲ್ ೨೨ ರಿಂದ ಸಮೀಪದ ಚೆರಿಯಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಕೊಡವ ಕ್ರಿಕೆಟ್ ಅಕಾಡೆಮಿ ಮತ್ತು ಬಾಳೆಯಡ ಕುಟುಂಬದ ವತಿಯಿಂದ ನಡೆಯಲಿದ್ದು, ಕೊಡವ ಕೌಟುಂಬಿಕ ಕ್ರಿಕೆಟ್ ಉತ್ಸವ ಯಶಸ್ಸಿಗೆ ಸಹಕರಿಸಬೇಕು ಎಂದು ಕುಟುಂಬದ ಕ್ರಿಕೆಟ್ ಉತ್ಸವ ಅಧ್ಯಕ್ಷ ನಿವೃತ್ತ ಕರ್ನಲ್, ಮಾಜಿ ಒಲಂಪಿಯನ್ ಬಾಳೆಯಡ ಕೆ. ಸುಬ್ರಮಣಿ ಮನವಿ ಮಾಡಿದರು. ನಾಪೋಕ್ಲುವಿನ ಹಳೆತಾಲೂಕು ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದ್ದ ನಮ್ಮೆಯ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು ಕ್ರಿಕೆಟ್ ನಮ್ಮೆ ಆಯೋಜನೆಯಿಂದ ಜನಾಂಗ ಒಗ್ಗಟ್ಟಾಗಲು ಅವಕಾಶ ದೊರಕುತ್ತದೆ. ೨೧ನೇ ವರ್ಷದ ನಮ್ಮೆಯನ್ನು ಅಚ್ಚುಕಟ್ಟಾಗಿ ನಡೆಸಲು ಸರ್ವರು ಸಹಕರಿಸಬೇಕು ಎಂದರು.

ಬಾಳೆಯಡ ಕ್ರಿಕೆಟ್ ಉತ್ಸವದಲ್ಲಿ ನೂರಕ್ಕೂ ಅಧಿಕ ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಹೆಸರು ನೋಂದಾಯಿಸಲು ಏಪ್ರಿಲ್ ೧೦ರ ತನಕ ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯ ಮೂಲೆ ಮೂಲೆಗಳಿಂದ ಕ್ರಿಕೆಟ್ ತಂಡಗಳು ಪಂದ್ಯಾಟದಲ್ಲಿ ಪಾಲ್ಗೊಂಡು ಪಂದ್ಯಾವಳಿಯನ್ನು ಯಶಸ್ವಿಗೊಳಿಸಿಕೊಡಬೇಕು ಎಂದು ಅವರು ಮನವಿ ಮಾಡಿದರು.

ಸಭೆಯಲ್ಲಿ ನಮ್ಮೆಯ ಯಶಸ್ವಿ ಆಯೋಜನೆಗೆ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು. ಈ ಸಂದರ್ಭ ಬಾಳೆಯಡ ಮೇದಪ್ಪ, ಮಂದಪ್ಪ, ಅಜಿತ್, ಪ್ರತೀಶ್ ಪೂವಯ್ಯ, ಶಿವು ಕುಮಾರ್, ಬಾಳೆಯಡ ಕುಟುಂಬದ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡಿದ್ದರು.