ವಿಧಾನಸೌಧದ ಎದುರು ಬಸವಣ್ಣ, ಕೆಂಪೇಗೌಡರ ಪ್ರತಿಮೆ ಅನಾವರಣ
ಬೆಂಗಳೂರು, ಮಾ. ೨೬: ವಿಧಾನಸೌಧ ಮುಂದೆ ಸ್ಥಾಪಿಸಿರುವ ಸಮಾಜ ಪರಿವರ್ತಕ, ಜಗಜ್ಯೋತಿ ಬಸವೇಶ್ವರ ಹಾಗೂ ಬೆಂಗಳೂರು ನಿರ್ಮಾತೃ, ನಾಡಪ್ರಭು ಕೆಂಪೇಗೌಡ ಅವರ ಪ್ರತಿಮೆಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅನಾವರಣಗೊಳಿಸಿದರು. ವಿಧಾನಸೌಧದ ಆವರಣದಲ್ಲಿರುವ ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿ ಮಧ್ಯ ಭಾಗದಲ್ಲಿ ಈ ಇಬ್ಬರೂ ಮಹಾನಿಯರ ನಾಲ್ಕು ಮೀಟರ್ ಎತ್ತರದ ಅಶ್ವಾರೂಢ ಪ್ರತಿಮೆಗಳು ಸ್ಥಾಪನೆಯಾಗಿವೆ. ಸುಮಾರು ರೂ. ೮ ಕೋಟಿ ವೆಚ್ಚದಲ್ಲಿ ಪ್ರತಿಮೆ ಸಿದ್ಧಗೊಂಡಿದ್ದು, ಕಳೆದ ಜನವರಿಯಲ್ಲಿ ಪ್ರತಿಮೆ ಸ್ಥಾಪನೆ ಸಂಬAಧ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಕಾರ್ಯಕ್ರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ, ಕಂದಾಯ ಸಚಿವ ಅಶೋಕ್, ಸುತ್ತೂರು ಶ್ರೀಗಳು, ಸಿದ್ದಗಂಗಾ ಶ್ರೀಗಳು, ಪೇಜಾವರ ಶ್ರೀಗಳು, ನಿರ್ಮಲಾನಂದನಾಥ ಶ್ರೀಗಳು ಸೇರಿದಂತೆ ಅನೇಕ ಸ್ವಾಮೀಜಿಗಳು, ಗಣ್ಯರು ಭಾಗಿಯಾಗಿದ್ದರು.
ಅಲ್ಪಸಂಖ್ಯಾತರ ಮೀಸಲಾತಿ ರದ್ಧತಿ-ಕಾಂಗ್ರೆಸ್ ಅಸಮಾಧಾನ
ಬೆಂಗಳೂರು, ಮಾ. ೨೬: ಅಲ್ಪಸಂಖ್ಯಾತರ ಮೀಸಲಾತಿ ರದ್ಧತಿಗೆ ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ. ಇಂದು ಬೆಂಗಳೂರಿನಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜಂಟಿ ಸುದ್ದಿಗೋಷ್ಠಿ ನಡೆಸಿ ಮೀಸಲಾತಿ ವಿಚಾರವಾಗಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಎಲ್ಲಾ ಜನತೆಗೂ ಮೋಸ ಮಾಡಲು ಬಿಜೆಪಿ ಸರ್ಕಾರ ಹೊರಟಿದೆ. ಪ್ರಜಾಪ್ರಭುತ್ವಕ್ಕೆ ಇದು ಕರಾಳ ದಿನಗಳಾಗಿವೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ. ಮೀಸಲಾತಿಯನ್ನು ೯೦ ದಿನಗಳಲ್ಲಿ ೩ ಬಾರಿ ಬದಲಾಯಿಸಲಾಗಿದೆ. ಒಕ್ಕಲಿಗ ಸಮುದಾಯ ಹಾಗೂ ಲಿಂಗಾಯತರೇನು ಭಿಕ್ಷುಕರಾ, ಯಾಕೆ ಅಲ್ಪಸಂಖ್ಯಾತರ ಮೀಸಲಾತಿ ಕಿತ್ತುಕೊಳ್ಳಬೇಕು. ಬಿಜೆಪಿಯ ಅವೈಜ್ಞಾನಿಕ ತೀರ್ಮಾನವನ್ನು ಕಾಂಗ್ರೆಸ್ ಖಂಡಿಸುತ್ತದೆ. ನಾವೂ ಅಧಿಕಾರಕ್ಕೆ ಬಂದಮೇಲೆ ಇದನ್ನು ರದ್ದು ಮಾಡಿ ಎಲ್ಲಾ ಸಮುದಾಯಗಳಿಗೆ ಸಮಾನವಾದ ನ್ಯಾಯ ಕೊಡುತ್ತೇವೆ ಎಂದು ಹೇಳಿದರು.
ವಿಮೋಚನೆಗಾಗಿ ಹೋರಾಡಿದವರನ್ನು ಕಾಂಗ್ರೆಸ್ ನೆನಪಿಸಿಕೊಳ್ಳಲ್ಲ : ಅಮಿತ್ ಶಾ
ಬೀದರ್, ಮಾ. ೨೬: ಕ್ರೂರ ನಿಜಾಮ ಆಳ್ವಿಕೆಯಿಂದ ಹೈದರಾಬಾದ್‌ನ ವಿಮೋಚನೆಗಾಗಿ ಹೋರಾಡಿದ ಮತ್ತು ತಮ್ಮ ಪ್ರಾಣವನ್ನು ತ್ಯಾಗ ಮಾಡಿದವರನ್ನು ಕಾಂಗ್ರೆಸ್ ಎಂದಿಗೂ ನೆನಪಿಸಿಕೊಳ್ಳುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಆರೋಪಿಸಿದ್ದಾರೆ. ಜಿಲ್ಲೆಯ ಗೋರಟಾ ಗ್ರಾಮದಲ್ಲಿ ಗೋರಟಾ ಹುತಾತ್ಮರ ಸ್ಮಾರಕ ಮತ್ತು ದೇಶದ ಮೊದಲ ಗೃಹ ಸಚಿವ ದಿವಂಗತ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಯನ್ನು ಉದ್ಘಾಟಿಸಿದ ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಶಾ, ಹೈದರಾಬಾದ್ ವಿಮೋಚನಾ ದಿನವನ್ನು ಆಚರಿಸಲು ಹಿಂದೇಟು ಹಾಕುತ್ತಿರುವ ಕೆ. ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ೧೯೪೮ರ ಮೇ ೯ ರಂದು ಗೋರಟಾದ ಭೀಕರತೆಯನ್ನು ನೆನಪಿಸಿಕೊಂಡ ಕೇಂದ್ರ ಸಚಿವರು, ದೇಶವು ಸ್ವತಂತ್ರ ಪಡೆದಾಗಲೂ ಗೋರಟಾದಲ್ಲಿ ಕ್ರೂರ ನಿಜಾಮರಿಂದ ೨೦೦ಕ್ಕೂ ಹೆಚ್ಚು ಜನರನ್ನು ಕಗ್ಗೊಲೆ ಮಾಡಲಾಯಿತು. ಆದರೆ, ಅದರ ತುಷ್ಟೀಕರಣ ನೀತಿಯಿಂದಾಗಿ, ತನ್ನ ಮತ ಬ್ಯಾಂಕ್‌ಗಾಗಿ ದುರಾಸೆಗಾಗಿ ಹೈದರಾಬಾದ್ ವಿಮೋಚನೆಗಾಗಿ ಹೋರಾಡಿ ಪ್ರಾಣ ತ್ಯಾಗ ಮಾಡಿದವರನ್ನು ಕಾಂಗ್ರೆಸ್ ಎಂದಿಗೂ ನೆನಪಿಸಿಕೊಳ್ಳಲಿಲ್ಲ ಎಂದು ಹೇಳಿದರು.
ಬಾಕ್ಸಿಂಗ್ : ನಿಖತ್ ಜರೀನ್ ಜಯ
ನವದೆಹಲಿ, ಮಾ. ೨೬: ಬಾಕ್ಸಿಂಗ್ ವಿಶ್ವ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಭಾರತದ ಸ್ಟಾರ್ ಬಾಕ್ಸರ್ ನಿಖತ್ ಜರೀನ್ ಭರ್ಜರಿ ಜಯ ಸಾಧಿಸಿದ್ದು, ೨ನೇ ಬಾರಿಗೆ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ. ಭಾನುವಾರ ದೆಹಲಿಯಲ್ಲಿ ನಡೆದ ೫೦ ಕೆಜಿ ಶೃಂಗಸಭೆಯಲ್ಲಿ ವಿಯೆಟ್ನಾಂನ ನ್ಗುಯೆನ್ ಥಿ ಟಾಮ್ ಅವರನ್ನು ಸೋಲಿಸುವ ಮೂಲಕ ಭಾರತದ ಏಸ್ ಬಾಕ್ಸರ್ ನಿಖತ್ ಜರೀನ್ ತಮ್ಮ ಹೆಸರಿಗೆ ಎರಡನೇ ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಸೇರಿಸಿದ್ದಾರೆ. ಆ ಮೂಲಕ ದಾಖಲೆಯ ೨ನೇ ಬಾರಿಗೆ ವಿಶ್ವ ಚಾಂಪಿಯನ್ ಶಿಪ್ ಪ್ರಶಸ್ತಿ ಜಯಿಸಿದ್ದಾರೆ. ಈ ಸಾಧನೆ ಮಾಡಿದ ಭಾರತದ ೨ನೇ ಮಹಿಳಾ ಬಾಕ್ಸರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಈ ಹಿಂದೆ ಎಂಸಿ ಮೇರಿ ಕೋಮ್ ಎರಡು ಬಾರಿ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದಿದ್ದರು.
ಮೀಸಲಾತಿ ರದ್ದು : ಸರ್ಕಾರದ ನಿರ್ಧಾರಕ್ಕೆ ಅಮಿತ್ ಶಾ ಸಮರ್ಥನೆ
ಬೀದರ್/ರಾಯಚೂರು, ಮಾ. ೨೬: ಮುಸ್ಲಿಮರಿಗೆ ಪ್ರವರ್ಗ ೨ಬಿ ಅಡಿಯಲ್ಲಿದ್ದ ಶೇ. ೪ರಷ್ಟು ಮೀಸಲಾತಿಯನ್ನು ರದ್ದುಪಡಿಸುವ ಕರ್ನಾಟಕ ಸರ್ಕಾರದ ನಿರ್ಧಾರವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಶ್ಲಾಘಿಸಿದ್ದು, ಧಾರ್ಮಿಕ ಮೀಸಲಾತಿಯು ಸಾಂವಿಧಾನಿಕವಾಗಿ ಅಮಾನ್ಯವಾಗಿದೆ ಎಂದು ಹೇಳಿದ್ದಾರೆ. ಬೀದರ್ ಜಿಲ್ಲೆಯ ಗೋರಟಾ ಗ್ರಾಮ ಮತ್ತು ರಾಯಚೂರು ಜಿಲ್ಲೆಯ ಗಬ್ಬೂರಿನಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ತನ್ನ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಮುಸ್ಲಿಮರಿಗೆ ಶೇ. ೪ರಷ್ಟು ಮೀಸಲಾತಿಯನ್ನು ಜಾರಿಗೆ ತಂದಿದೆ ಎಂದು ಟೀಕಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವೂ ಹೊಸ ಒಳಮೀಸಲಾತಿ ಜಾರಿಗೆ ತರುವ ಮೂಲಕ ಪರಿಶಿಷ್ಟ ಜಾತಿಗೆ ಆಗಿರುವ ಅನ್ಯಾಯವನ್ನು ದೂರ ಮಾಡಲು ಪ್ರಯತ್ನಿಸಿದೆ ಎಂದು ಗಮನ ಸೆಳೆದರು.
ಪರಾರಿಯಾಗಿದ್ದ ಪ್ರಿಯಕರನಿಂದ ಯುವತಿಯ ಹತ್ಯೆ
ಹಾಪುರ್, ಮಾ. ೨೬: ತಾನು ಪರಾರಿಯಾಗಿದ್ದ ಉತ್ತರ ಪ್ರದೇಶ ಪ್ರಿಯಕರನಿಂದಲೇ ಜಮ್ಮು ಮೂಲದ ಅಪ್ರಾಪ್ತ ಯುವತಿ ಭೀಕರವಾಗಿ ಹತ್ಯೆಗೀಡಾಗಿರುವ ಘಟನೆ ವರದಿಯಾಗಿದೆ. ಉತ್ತರ ಪ್ರದೇಶದ ಹಾಪುರ್‌ನ ಭೀಮ್ ನಗರದಲ್ಲಿ ಈ ಘಟನೆ ನಡೆದಿದ್ದು, ಮಾರ್ಚ್ ೨೨ ರಂದು ಹಾಪುರ್‌ನ ಭೀಮ್ ನಗರದಲ್ಲಿರುವ ತನ್ನ ಮನೆಯಲ್ಲಿ ಮಾಹಿನೂರ್ ಎಂಬ ಜಮ್ಮು ಮೂಲದ ೧೬ ವರ್ಷದ ಅಪ್ರಾಪ್ತ ಯುವತಿ ಕೊಲೆಯಾಗಿದ್ದಾಳೆ. ಯುವತಿಯನ್ನು ಆಕೆಯ ಪ್ರಿಯಕರ ಆಶು ಎಂಬಾತನೇ ಕತ್ತು ಹಿಸುಕಿ ಕೊಂದುಹಾಕಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಸ್ತುತ ಕಾರ್ಯಾಚರಣೆ ನಡೆಸಿ ಪೊಲೀಸರು ಕೊಲೆಗೈದ ಪ್ರಿಯಕರ ಆಶುನನ್ನು ಬಂಧಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ನಾಲ್ಕು ತಿಂಗಳ ಹಿಂದೆ ಹಾಪುರ್ ಕೊತ್ವಾಲಿ ಪ್ರದೇಶದ ನಿರ್ಗತಿಕರ ಸೇವಾ ಸಮಿತಿಯ ನಿವಾಸಿ ಆಶು ಜಮ್ಮುವಿಗೆ ಬಂದಿದ್ದ. ಈ ವೇಳೆ ಅಲ್ಲಿ ಅವನು ೧೬ ವರ್ಷದ ಅಪ್ರಾಪ್ತ ಯುವತಿ ಮಾಹಿನೂರ್ ಜೊತೆ ಸ್ನೇಹ ಬೆಳೆಸಿದ್ದ. ಬಳಿಕ ಆಕೆಯನ್ನು ಪ್ರೀತಿಸುವುದಾಗಿ ಹೇಳಿ ತನ್ನೊಂದಿಗೆ ಹಾಪುರ್‌ಗೆ ಬರುವಂತೆ ಮನವೊಲಿಸಿ ಆಕೆಯೊಂದಿಗೆ ಹಾಪುರ್‌ಗೆ ಪರಾರಿಯಾಗಿದ್ದ ಎಂದು ಹುಡುಗಿಯ ತಂದೆ ತಾಲಿಬ್ ಅಲಿ ಪೊಲೀಸರಿಗೆ ತಿಳಿಸಿದ್ದಾರೆ.
ಸೌದಿ ದೊರೆ ನೀಡಿದ್ದ ಚಿರತೆ ಸಾವು
ಹೈದರಾಬಾದ್, ಮಾ. ೨೬: ಸೌದಿ ಅರೇಬಿಯಾದ ದೊರೆ ಹೈದರಾಬಾದ್‌ನ ಜವಾಹರಲಾಲ್ ನೆಹರು ಮೃಗಾಲಯಕ್ಕೆ ನೀಡಿದ್ದ ‘ಅಬ್ದುಲ್ಲಾ’ ಎಂಬ ಗಂಡು ಚಿರತೆ ಹೃದಯಾಘಾತದಿಂದ ಮೃತಪಟ್ಟಿದೆ ಎಂದು ತಿಳಿದುಬಂದಿದೆ. ೧೫ ವರ್ಷದ ಈ ಚಿತಾ ಕೆಲ ದಿನಗಳಿಂದ ಕಾಯಿಲೆಯಿಂದ ಬಳಲುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೇ ಹೃದಯಾಘಾತವಾಗಿ ಮೃತಪಟ್ಟಿದೆ ಎನ್ನಲಾಗಿದೆ. ೨೦೧೩ ರಲ್ಲಿ ಸೌದಿ ದೊರೆ ಮೊಹಮ್ಮದ್ ಅಲ್ ಸೌದ್ ಅವರು ಭಾರತ ಭೇಟಿ ವೇಳೆ ಹಿಬಾ ಎಂಬ ಒಂದು ಹೆಣ್ಣು ಚಿತಾ ಹಾಗೂ ಅಬ್ದುಲ್ಲಾ ಎಂಬ ಒಂದು ಗಂಡು ಚಿತಾವನ್ನು ಸ್ನೇಹಾರ್ಥವಾಗಿ ಜವಾಹರಲಾಲ್ ನೆಹರು ಮೃಗಾಲಯಕ್ಕೆ ನೀಡಿದ್ದರು. ೨೦೨೦ ರಲ್ಲಿ ಇದೇ ಮೃಗಾಲಯದಲ್ಲಿ ಹಿಬಾ ಚಿತಾ ಮೃತಪಟ್ಟಿತ್ತು. ಕಳೆದ ವರ್ಷ ನಮಿಬಿಯಾದಿಂದ ೮ ಚಿತಾಗಳನ್ನು ತಂದು ಭಾರತದ ಕುನೊ ರಾಷ್ಟಿçÃಯ ಉದ್ಯಾನಕ್ಕೆ ಬಿಡಲಾಗಿತ್ತು.