ಮಡಿಕೇರಿ, ಮಾ. ೨೫: ರಾಜ್ಯ ಸರ್ಕಾರ ಅಲ್ಪಸಂಖ್ಯಾತರಿಗೆ ನೀಡಲಾಗಿದ್ದ ಶೇ.೪ರ ಮೀಸಲಾತಿ ಯನ್ನು ರದ್ದುಪಡಿಸಿರುವುದು ಈ ರಾಜ್ಯದ ದುರಂತವಾಗಿದ್ದು, ಇದರ ವಿರುದ್ಧ ಕಾನೂನು ಹೋರಾಟ ನಡೆಸಬೇಕಿದೆ ಎಂದು ಜಿಲ್ಲಾ ಜೆಡಿಎಸ್ ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್, ೧೯೫೦ರಲ್ಲಿ ಸಂವಿಧಾನ ರಚನೆಯ ಬಳಿಕ ಎಲ್ಲಾ ಸಮುದಾಯಗಳಿಗೆ ಮೀಸಲಾತಿ ಹಾಗೂ ಒಳ ಮೀಸಲಾತಿಗಳನ್ನು ನೀಡಲಾಗಿದೆ. ಅದರಂತೆ ಮುಸ್ಲಿಂ ಸಮುದಾಯಕ್ಕೆ ಶೇ.೪ರ ಮೀಸಲಾತಿ ನೀಡಲಾಗಿತ್ತು. ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಬಿಜೆಪಿ ಸರಕಾರ ಓಟ್ ಬ್ಯಾಂಕ್‌ಗಾಗಿ ಮುಸ್ಲಿಮರ ಮೀಸಲಾತಿಯನ್ನು ರದ್ದು ಮಾಡಿ ಇತರ ಸಮುದಾಯಕ್ಕೆ ಹಂಚಿಕೆ ಮಾಡಿದೆ. ಇದನ್ನು ಜಿಲ್ಲಾ ಜೆಡಿಎಸ್ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.

ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಇಸಾಕ್ ಖಾನ್ ಮಾತನಾಡಿ, ಓಟ್ ಬ್ಯಾಂಕ್‌ಗಾಗಿ ಮುಸಲ್ಮಾನರ ಮೇಲೆ ನಿರಂತರವಾಗಿ ದಬ್ಬಾಳಿಕೆ ನಡೆಸಲಾಗುತ್ತಿದೆ. ಇದೀಗ ರಾಜಕೀಯ ಉದ್ದೇಶಕ್ಕಾಗಿ ಮೀಸಲಾತಿಯನ್ನು ರದ್ದು ಮಾಡಲಾಗಿದ್ದು, ಇದರ ವಿರುದ್ಧ ಬೀದಿಗಿಳಿದು ಹೋರಾಟ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಹಿಜಾಬ್, ಹಲಾಲ್, ಬುರ್ಖಾ ಮತ್ತಿತರ ವಿಚಾರಗಳನ್ನು ಮುಂದಿಟ್ಟುಕೊAಡು ಬಸವರಾಜ ಬೊಮ್ಮಾಯಿ ಸರಕಾರ ನಿರಂತರವಾಗಿ ಮುಸ್ಲಿಂ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು. ಸಂವಿಧಾನದ ಅಡಿಯಲ್ಲಿ ನ್ಯಾಯ ಪಡೆಯಲು ಹೋರಾಟ ಮಾಡುವ ಅನಿವಾರ್ಯತೆಯನ್ನು ಸರಕಾರ ಹುಟ್ಟು ಹಾಕಿದ್ದು, ಅದರಿಂದಾಗುವ ಎಲ್ಲಾ ಕಷ್ಟನಷ್ಟಗಳಿಗೆ ಸರಕಾರವೇ ಹೊಣೆಯಾಗುತ್ತದೆ ಎಂದು ಹೇಳಿದರು.

ಜೆಡಿಎಸ್ ಮುಖಂಡ ಮನ್ಸೂರ್ ಆಲಿ ಮಾತನಾಡಿ, ಮೀಸಲಾತಿ ರದ್ದು ಮಾಡಿರುವುದು ಮುಸ್ಲಿಂ ಸಮುದಾಯಕ್ಕೆ ನೋವುಂಟು ಮಾಡಿದೆ ಎಂದರು. ಈ ಮೀಸಲಾತಿಯಲ್ಲಿಯೇ ಸಮುದಾಯದ ಸಾವಿರಾರು ಮಕ್ಕಳು ಇಂಜಿನಿಯರ್, ವೈದ್ಯಕೀಯ ಕ್ಷೇತ್ರ ಸೇರಿದಂತೆ ಉನ್ನತ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.

ಮೋಹನ್ ಮೌರ್ಯ ಮಾತನಾಡಿ, ಮೀಸಲಾತಿ ಎಂಬದು ಭಿಕ್ಷೆಯಲ್ಲ, ಅದು ಸಂವಿಧಾನ ಬದ್ಧವಾದ ಹಕ್ಕು ಎಂದು ಪ್ರತಿಪಾದಿಸಿದರು. ಸುದ್ದಿಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ಲೀಲಾ ಶೇಷಮ್ಮ, ಸುನೀಲ್ ಉಪಸ್ಥಿತರಿದ್ದರು.