ಮಡಿಕೇರಿ, ಮಾ. ೨೫: "ಕೊಡವರ ರಕ್ತ ಹೈಬ್ರಿಡ್ ರಕ್ತ" ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿರುವ ಮಂಡ್ಯ ಜಿಲ್ಲಾ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶ್ ಗೌಡ ಕೂಡಲೇ ಕೊಡವ ಜನಾಂಗದ ಕ್ಷಮೆಯಾಚಿಸಬೇಕು. ಇಲ್ಲದಿದ್ದಲ್ಲಿ ಕಾನೂನು ಹೋರಾಟ ನಡೆಸಬೇಕಾಗುತ್ತದೆ ಎಂದು ಅಖಿಲ ಕೊಡವ ಸಮಾಜ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಎಚ್ಚರಿಸಿದೆ.

ಈ ಕುರಿತು ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಹಾಗೂ ಯೂತ್ ವಿಂಗ್ ಅಧ್ಯಕ್ಷ ಚಮ್ಮಟ್ಟೀರ ಪ್ರವೀಣ್ ಉತ್ತಪ್ಪ ಅವರು, ಅಡ್ಡಂಡ ಕಾರ್ಯಪ್ಪ ಹಾಗೂ ಒಕ್ಕಲಿಗ ಗೌಡ ಜನಾಂಗದ ನಡುವೆ ಏರ್ಪಟ್ಟ ವಿವಾದದಲ್ಲಿ ಕೊಡವ ಜನಾಂಗವನ್ನು ದೂಷಿಸಿರುವುದು ಖಂಡನೀಯ.

ಕೊಡವರು ಸುಮ್ಮನೆ ಯಾರ ತಂಟೆಗೂ ಹೋದವರಲ್ಲ, ಯಾವುದೇ ಜನಾಂಗವನ್ನು ಬೊಟ್ಟು ಮಾಡಿದವರಲ್ಲ. ಆದರೆ ಇದೀಗ ವಿವಾದಾತ್ಮಕ ಹೇಳಿಕೆಯನ್ನು ನೀಡುವ ಮೂಲಕ ನಮ್ಮ ಜನಾಂಗದ ಭಾವನೆಯನ್ನು ಕೆರಳಿಸುವ ಕೆಲಸವಾಗಿದೆ. ಓರ್ವ ವ್ಯಕ್ತಿಯ ಮೇಲಿರುವ ಅಸಮಾಧಾನವನ್ನು ಮುಂದಿಟ್ಟು ಇಡೀ ಜನಾಂಗದ ಮೇಲೆ ಮಾತನಾಡಿರುವುದು ಖಂಡನಾರ್ಹ. ಇದರಿಂದ ಕೊಡವರ ಭಾವನೆ ಕೆರಳಿದೆ. ಕೊಡವ ಜನಾಂಗದ ಕ್ಷಮೆ ಕೇಳದಿದ್ದರೆ ೨೪ ಗಂಟೆಯೊಳಗೆ ಕಾನೂನಿನ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.